ವಿಜಯಪುರ: ಕೊರೊನಾ ನಿಯಂತ್ರಣಕ್ಕಾಗಿ ಕೇಂದ್ರ ವಿಧಿಸಿರುವ ಲಾಕ್ಡೌನ್ ಹಿನ್ನೆಲೆ ಜಿಲ್ಲೆಯ ಚಡಚಣ ತಾಲೂಕಿನ ಶ್ರೀ ಕ್ಷೇತ್ರ ಇಂಚಗೇರಿ ಮಠದಲ್ಲಿ ಮೇ. 31ರಿಂದ ಜೂನ್ 2ರವರೆಗೆ ಜರುಗಬೇಕಾಗಿದ್ದ ಸ್ವಾತಂತ್ರ್ಯ ಹೋರಾಟಗಾರ ಸದ್ಗುರು ಸಮರ್ಥ ಮಾಧವಾನಂದ ಪ್ರಭೂಜಿಯವರ ಪುಣ್ಯಾರಾಧನೆ ರದ್ದುಪಡಿಸಲಾಗಿದೆ.
ಪ್ರತಿ ವರ್ಷ ಈ ಪುಣ್ಯಾರಾಧನೆಯಲ್ಲಿ ಸುಮಾರು 1 ಲಕ್ಷದವರೆಗೆ ಭಕ್ತಾದಿಗಳು ಸೇರುತ್ತಿದ್ದರು. ಅದರಲ್ಲೂ ವಿಶೇಷವಾಗಿ ಮಹಾರಾಷ್ಟ್ರದ ಸೊಲ್ಲಾಪುರ, ಕೊಲ್ಲಾಪುರ, ಸಾಂಗಲಿ ಜಿಲ್ಲೆ ಸೇರಿದಂತೆ ಪೂಣೆ, ಮುಂಬೈನಿಂದ ಮಾಧವಾನಂದ ಪ್ರಭುಜಿಗಳ ಅನುಯಾಯಿಗಳು ಪಾಲ್ಗೊಳ್ಳುತ್ತಿದ್ದರು. ಆದರೆ ಈ ಬಾರಿ ಕೊರೊನಾ ಎಲ್ಲೆಡೆ ಹರಡುತ್ತಿದ್ದು, ಸರ್ಕಾರ ಸಾರ್ವಜನಿಕ ಸಭೆ ಸಮಾರಂಭಗಳನ್ನು ನಿಷೇಧಿಸಿದೆ. ಹೀಗಾಗಿ ಮಠದಲ್ಲಿ ನಡೆಯಬೇಕಿದ್ದ ಪುಣ್ಯಾರಾಧನೆ ಕಾರ್ಯಕ್ರಮವನ್ನ ರದ್ದು ಮಾಡಿದ್ದೇವೆ. ಇನ್ನು ಇಂಚಗೇರಿ ಸಂಪ್ರದಾಯದ ಭಕ್ತಾದಿಗಳು ತಮ್ಮ ತಮ್ಮ ಮನೆಗಳಲ್ಲಿಯೇ ನಿತ್ಯ ನಿಯಮ, ಭಜನೆ, ಧ್ಯಾನ ಮಾಡುವ ಮೂಲಕ ಶ್ರೀ ಸದ್ಗುರು ಸಮರ್ಥ ಮಾಧವಾನಂದ ಪ್ರಭೂಜಿಯವರ ಪುಣ್ಯಾರಾಧನೆ ಆಚರಿಸಬೇಕೆಂದು ಶ್ರೀ ಕ್ಷೇತ್ರ ಇಂಚಗೇರಿ ಮಠದ ಪೀಠಾಧಿಪತಿ ಸದ್ಗುರು ಸಮರ್ಥ ರೇವಣಸಿದ್ದೇಶ್ವರ ಮಹಾರಾಜರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.