ವಿಜಯಪುರ: ಜಿಲ್ಲೆಯಲ್ಲಿ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಕೆರೆ - ಕಟ್ಟೆ, ನದಿಗಳು ಮೈದುಂಬಿ ಹರಿಯುತ್ತಿದ್ದು, ಪ್ರವಾಸಿಗರನ್ನು ಆಕರ್ಷಿಸುತ್ತಿವೆ. ತಿಕೋಟಾ ತಾಲೂಕಿನ ಕಳ್ಳಕವಟಗಿ ಗ್ರಾಮದ ಕೆರೆ ಭರ್ತಿಯಾಗಿ ಕೋಡಿ ಹೋಗುತ್ತಿದ್ದು, ರಭಸದಿಂದ ಹರಿಯುತ್ತಿರುವ ಈ ನೀರಿನಲ್ಲಿ ಈಜಾಡಲು ಯುವಕರ ದಂಡೇ ಅಲ್ಲಿಗೆ ಭೇಟಿ ಕೊಡುತ್ತಿದೆ.
ಜಿಲ್ಲೆಯ ಭೀಮಾ, ಕೃಷ್ಣಾ, ಡೋಣಿ ನದಿಗಳು ನೀರಿನ ರಭಸಕ್ಕೆ ಭೋರ್ಗರೆಯುತ್ತಿವೆ. ಗ್ರಾಮದ ಐತಿಹಾಸಿಕ ಸಂಗಮನಾಥ ದೇವಾಲಯಕ್ಕೆ ಹೊಂದಿ ಕೊಂಡಿರುವ ಕಳ್ಳಕವಟಗಿ (ತೊರವಿ) ಕೆರೆ ತುಂಬಿರುವ ಪರಿಣಾಮ ದೇವಾಲಯ ಸಂಪೂರ್ಣ ಜಲಾವೃತವಾಗಿದೆ.
ಮೈ ದುಂಬಿ ಹರಿಯುತ್ತಿರುವ ಕೆರೆ ವೀಕ್ಷಿಸಲು ಪಕ್ಕದ ಬಾಬಾನಗರ, ಬಿಜ್ಜರಗಿ, ಘೋಣಸಗಿ, ತಿಕೋಟಾ ಸೇರಿದಂತೆ ಸುತ್ತಮುತ್ತ ಗ್ರಾಮಗಳ ಜನರು ತಂಡೋಪ ತಂಡವಾಗಿ ಬರುತ್ತಿದ್ದಾರೆ. ಮಾಜಿ ಸಚಿವ ಎಂ.ಬಿ.ಪಾಟೀಲ್ ಅವರ ಸ್ವಕ್ಷೇತ್ರ ಇದಾಗಿದ್ದು, ಅವರು ನೀರಾವರಿ ಸಚಿವರಾಗಿದ್ದ ವೇಳೆ ತಿಕೋಟಾವನ್ನು ನೀರಾವರಿಗೆ ಒಳಪಡಿಸಿದ್ದರು. ಅದಾದ ನಂತರ ಈ ಕೆರೆ ಪ್ರತಿ ವರ್ಷ ಭರ್ತಿಯಾಗುತ್ತಿದೆ.