ಮುದ್ದೇಬಿಹಾಳ : ವಿದ್ಯುತ್ ವಾಟರ್ ಹೀಟರ್‌ನಲ್ಲಿ ಶಾರ್ಟ್ ಸರ್ಕ್ಯೂಟ್ನಿಂದ ಮನೆಗೆ ಬೆಂಕಿ ಹೊತ್ತಿಕೊಂಡು ಸಂಕಷ್ಟದಲ್ಲಿದ್ದ ಮುಸ್ಲಿಂ ಕುಟುಂಬಕ್ಕೆ ಕುಂಟೋಜಿ ಚೆನ್ನವೀರ ದೇವರು ಸಹಾಯಹಸ್ತ ಚಾಚಿದ್ದಾರೆ.
ಪಟ್ಟಣದ ಆಶ್ರಯ ಕಾಲೋನಿಯ ನಿವಾಸಿ ಮೆಹಬೂಬ್ ಸಲೀಂ ಮುಲ್ಲಾ ಎಂಬುವರ ಮನೆಯಲ್ಲಿ ಗುರುವಾರ ಈ ಬೆಂಕಿ ಅವಘಡ ಸಂಭವಿಸಿ ಮನೆಯಲ್ಲಿದ್ದ ದಿನ ಬಳಕೆ ವಸ್ತುಗಳು, ಬಟ್ಟೆ ಬರೆ, ಆಹಾರ ಧಾನ್ಯ ಸುಟ್ಟು ಭಸ್ಮವಾಗಿದ್ದವು.
ಈ ಬಗ್ಗೆ ಮಾಧ್ಯಮಗಳ ವರದಿ ಗಮನಿಸಿದ ಕುಂಟೋಜಿ ಹಿರೇಮಠದ ಚೆನ್ನವೀರ ದೇವರು, ಶುಕ್ರವಾರ ಮುಸ್ಲಿಂ ಬಾಂಧವರ ಮನೆಗೆ ಭೇಟಿ ನೀಡಿ ಕುಟುಂಬಕ್ಕೆ ದಿನಸಿ ಪದಾರ್ಥ,ಅಕ್ಕಿ ಪ್ಯಾಕೇಟ್,ಮಕ್ಕಳಿಗೆ ಬಿಸ್ಕೇಟ್ ಮತ್ತಿತರ ಸಾಮಗ್ರಿ ನೀಡಿ ಧೈರ್ಯ ಹೇಳಿದರು.
ಈ ವೇಳೆ ಮಾತನಾಡಿದ ಅವರು, ಸಂಕಷ್ಟದಲ್ಲಿರುವವರ ನೆರವಿಗೆ ನಮ್ಮ ಮಠ ಧಾವಿಸಬೇಕು ಎಂಬ ಉದ್ದೇಶದಿಂದ ನೆರವು ನೀಡಿದ್ದೇವೆ. ಸ್ಥಿತಿವಂತರು ಇವರ ಕಷ್ಟಕ್ಕೆ ಸ್ಪಂದಿಸಿ ಮನೆ ಪುನಃ ನಿರ್ಮಾಣ ಮಾಡಿಕೊಡಲು ಸಹಕಾರ ನೀಡಬೇಕು ಎಂದರು.
ಸಂತ್ರಸ್ತ ಮೆಹಬೂಬ ಮುಲ್ಲಾ ಮಾತನಾಡಿ, ಬೆಂಕಿ ಅವಘಡದಲ್ಲಿ ಮನೆ ಕಳೆದುಕೊಂಡಿರುವ ನಾವು ಬಡವರಿದ್ದೇವೆ. ಬೆಂಕಿ ಬಿದ್ದು ಮನೆಯಲ್ಲಿನ ಎಲ್ಲಾ ವಸ್ತುಗಳು ಸುಟ್ಟಿದ್ದು ಬೇರೆಯವರ ಮನೆಯಲ್ಲಿ ಮಲಗುವ ಪರಿಸ್ಥಿತಿ ಬಂದಿದೆ. ನಮಗೆ ಸೂಕ್ತ ಪರಿಹಾರ ನೀಡುವಂತೆ ಮನವಿ ಮಾಡಿದರು.