ವಿಜಯಪುರ: ಕೃಷಿ ಕ್ಷೇತ್ರ ಸಂಕಷ್ಟದಲ್ಲಿದೆ. ಮಳೆ ಆಧಾರಿತ ಬೆಳೆ ಬೆಳೆಯುವುದು ಕಷ್ಟಕರವಾಗಿದೆ. ಆದ್ದರಿಂದ ರೈತರು ಕೃಷಿಯಲ್ಲಿ ಆಧುನಿಕತೆ ಅಳವಡಿಸಿಕೊಳ್ಳಬೇಕು ಎಂದು ಮಾಜಿ ಸಚಿವ ಎಂ.ಬಿ.ಪಾಟೀಲ್ ಹೇಳಿದರು.
ಸಿಂದಗಿ ತಾಲೂಕಿನ ಮೋರಟಗಿ ಗ್ರಾಮದ ಪ್ರಗತಿಪರ ರೈತ ಮಹಮ್ಮದ್ ಅಲಿ ರಾಯಚೂರ ಎಂಬುವರ ತೋಟದಲ್ಲಿ ಹಮ್ಮಿಕೊಂಡಿದ್ದ ಮೆಣಸಿನಕಾಯಿ ಬೆಳೆ ಕುರಿತ ವಿಚಾರ ಸಂಕಿರಣ ಹಾಗೂ ಕ್ಷೇತ್ರೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಅಂದು ನಾನು ಜಲಸಂಪನ್ಮೂಲ ಸಚಿವನಾಗಿದ್ದಾಗ ಮಾಡಿದ ಕಾರ್ಯ ಈಗ ಮಾದರಿಯಾಗಿದೆ. ಕೇವಲ ಕೆರೆ, ಹೊಂಡ ಮಾತ್ರವಲ್ಲದೆ ಜಿಲ್ಲೆಯ 200 ಹಳ್ಳಗಳಿಗೆ ನೀರು ಕೊಟ್ಟ ಪರಿಣಾಮ ಜಿಲ್ಲೆಯ ಜನ ನೆಮ್ಮದಿಯಿಂದ ಇದ್ದಾರೆ ಎಂದರು.
ಜೇರಟಗಿ ವಿರಕ್ತಮಠದ ಮಹಾಂತ ಶ್ರೀಗಳು ಕಾರ್ಯಕ್ರಮದ ನೇತೃತ್ವ ವಹಿಸಿದ್ದರು. ಬಾಗಲಕೋಟೆ ತೋಟಗಾರಿಕೆ ವಿಶ್ವವಿದ್ಯಾಲಯದ ಕುಲಪತಿ ಡಾ. ಕೆ.ಎಂ.ಇಂದ್ರೇಶ ಅಧ್ಯಕ್ಷತೆ ವಹಿಸಿದ್ದರು. ವಿಜಯಪುರದ ಜಂಟಿ ಕೃಷಿ ನಿರ್ದೇಶಕ ಶಿವಕುಮಾರ, ಶಾತವೀರ ರೊಟ್ಟಿ, ರಾಮು ಮರಾಠೆ, ಡಾ. ಮಹಾಂತೇಶ ಬಿರಾದಾರ ಉಪಸ್ಥಿತರಿದ್ದರು.