ಬಾಗಲಕೋಟೆ/ಮುದ್ದೇಬಿಹಾಳ : ಮಹಾಮಾರಿ ಕೋವಿಡ್-19 ಸಾಂಕ್ರಾಮಿಕ ರೋಗ ಹರಡದಂತೆ ಜನರಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಬಾಗಲಕೋಟೆ ನಗರ ಹಾಗೂ ಬಿಜಾಪುರ ಜಿಲ್ಲೆಯ ಮುದ್ದೇಬಿಹಾಳದಲ್ಲಿ ಜಾಗೃತಿ ಜಾಥಾ ನಡೆಸಲಾಯಿತು.
ಬಾಗಲಕೋಟೆಯಲ್ಲಿ ಕೋವಿಡ್-19 ಜನಾಂದೋಲನ ಅಭಿಯಾನಕ್ಕೆ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಕಲ್ಪನಾ ಕುಲಕರ್ಣಿ ಜಾಗೃತಿ ಜಾಥಾಗೆ ಹಸಿರು ನಿಶಾನೆ ತೋರುವ ಮೂಲಕ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು, ಕೋವಿಡ್ ಸೋಂಕಿಗೆ ಯಾವುದೇ ರೀತಿಯ ಲಸಿಕೆ ಇಲ್ಲದ ಕಾರಣ ಕೊರೊನಾ ಹರಡದಂತೆ ಜಾಗೃತಿ ಮೂಡಿಸುವುದು ಅಗತ್ಯವಾಗಿದೆ. ಆದ್ದರಿಂದ ಸಾರ್ವಜನಿಕರು ಕಡ್ಡಾಯವಾಗಿ ಮಾಸ್ಕ್ ಧರಿಬೇಕು ಹಾಗೂ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು ಎಂದು ತಿಳಿಸಿದರು. ಇದೇ ಸಂದರ್ಭದಲ್ಲಿ ಪ್ರತಿಜ್ಞಾವಿಧಿ ಬೋಧಿಸಲಾಯಿತು.
ಇನ್ನು ಬಿಜಾಪುರ ಜಿಲ್ಲೆಯ ಮುದ್ದೇಬಿಹಾಳ ಪಟ್ಟಣ ನ್ಯಾಯಾಲಯದ ಆವರಣದಲ್ಲಿ ಕೋವಿಡ್-19 ಜಾಗೃತಿ ಜಾಥಾಗೆ ಸಿವ್ಹಿಲ್ ನ್ಯಾಯಾಧೀಶರಾದ ಕೆ.ಜಿ.ಚಿಂತಾ ಚಾಲನೆ ನೀಡಿದರು. ಈ ವೇಳೆ ಮಾತನಾಡಿದ ವಕೀಲರ ಸಂಘದ ಅಧ್ಯಕ್ಷ ಎಂ.ಎಚ್. ಕ್ವಾರಿ, ಎಲ್ಲೆಡೆ ಕೊರೊನಾ ಹಾವಳಿ ಹೆಚ್ಚುತ್ತಿದ್ದು ಸುರಕ್ಷಿತ ಕ್ರಮಗಳನ್ನು ಅನುಸರಿಸುವಂತೆ ಸಲಹೆ ನೀಡಿದರು. ಮಾಸ್ಕ್ ಧರಿಸುವಿಕೆ, ಸ್ಯಾನಿಟೈಸರ್ ಬಳಸುವುದು, ಸೂಕ್ತ ಸಾಮಾಜಿಕ ಅಂತರ ಕಾಯ್ದುಳ್ಳುವುದು ಸೇರಿದಂತೆ ಹಲವು ಆರೋಗ್ಯ ಸಂಬಂಧಿ ಮುಂಜಾಗ್ರತಾ ಕ್ರಮ ಪಾಲನೆ ಮಾಡುವಂತೆ ಹೇಳಿದರು.