ವಿಜಯಪುರ: ತಮಿಳುನಾಡು ಮೂಲದ ಲಾರಿ ಚಾಲಕನ ಕೊಲೆ ಪ್ರಕರಣ ಭೇದಿಸಿರುವ ವಿಜಯಪುರ ಜಿಲ್ಲಾ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬಂಧಿತರನ್ನು ಭೂತನಾಳ ತಾಂಡಾದ ವೆಂಕಟೇಶ ಚುಂಚಪ್ಪ ಬೋಸಲೆ, ಮಹಾರಾಷ್ಟ್ರ ಮೂಲದ ಕೋಟೆ ಕೃಷ್ಣ ಕಾಳೆ ಹಾಗೂ ಬೇನಾಳ ಆರ್.ಸಿ ಗ್ರಾಮದ ಸುನೀಲ ಭಾಗಿ ಕಾಳೆ ಬಂಧಿತ ಆರೋಪಿಗಳು.
ಇವರು ಜ.18ರಂದು ವಿಜಯಪುರ ಜಿಲ್ಲೆಯ ಗೊಳಸಂಗಿ ಸಮೀಪದ ರಾಷ್ಟ್ರೀಯ ಹೆದ್ದಾರಿ 50ರಲ್ಲಿ ತಮಿಳುನಾಡು ಮೂಲದ ಲಾರಿ ಚಾಲಕ ರಾಜೇಶ ಲೋಗನಾಥ ಎಂಬಾತನನ್ನು ಕೊಲೆ ಮಾಡಿ, ಆತನ ಮೈ ಮೇಲೆ ಇದ್ದ ಬಟ್ಟೆ ಬಿಚ್ಚಿ ಹೆದ್ದಾರಿ ಪಕ್ಕ ಶವ ಎಸೆದು ಹೋಗಿದ್ದರು. ಈ ಕುರಿತು ಪ್ರಕರಣ ದಾಖಲಿಸಿಕೊಂಡ ಕೂಡಗಿ ಪೊಲೀಸರು ಆರೋಪಿಗಳ ಪತ್ತೆಗೆ ಜಾಲ ಬೀಸಿ ಅವರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಆರೋಪಿಗಳು ಹಾಗೂ ಮೃತ ವ್ಯಕ್ತಿಯ ನಡುವೆ ಇದ್ದ ವೈಯಕ್ತಿಕ ದ್ವೇಷವೇ ಕೊಲೆಗೆ ಕಾರಣ ಎಂದು ತಿಳಿದು ಬಂದಿದೆ.
ಇನ್ನು ಆರೋಪಿಗಳ ಬಂಧನಕ್ಕೆ ಶ್ರಮಿಸಿದ ಪೊಲೀಸರಿಗೆ ಎಸ್ಪಿ ಪ್ರಕಾಶ ನಿಕ್ಕಂ ಬಹುಮಾನ ಘೋಷಿಸಿದ್ದಾರೆ.