ವಿಜಯಪುರ : ಜಿಲ್ಲೆಯನ್ನು ಸಂಪೂರ್ಣ ನೀರಾವರಿಗೆ ಒಳಪಡಿಸಿ ಜಿಲ್ಲೆಯ ಆಧುನಿಕ ಭಗೀರಥ ಎಂದು ಕರೆಯಿಸಿಕೊಳ್ಳುತ್ತಿರುವ ಗೃಹಸಚಿವ ಎಂ.ಬಿ.ಪಾಟೀಲ ಅವರ ಪ್ರತಿಮೆಯನ್ನು ನಿರ್ಮಿಸುವ ಉದ್ದೇಶ ಹೊಂದಲಾಗಿದೆ ಎಂದು ನಾಗಠಾಣ ಜೆಡಿಎಸ್ ಶಾಸಕ ದೇವಾನಂದ ಚವ್ಹಾಣ ಹೇಳಿದರು.
ತಿಡಗುಂದಿ ಶಾಖಾ ಕಾಲುವೆ ಹಾಗೂ ಜಲಸೇತುವೆ ಕಾಮಗಾರಿಯನ್ನು ಸಚಿವರ ಜತೆ ವೀಕ್ಷಿಸಿದ ನಂತರ ಮಾತನಾಡಿ, ಪಾಟೀಲರು ನನ್ನ ರಾಜಕೀಯ ಗುರುಗಳು ಅವರು ಜಲಸಂಪನ್ಮೂಲ ಸಚಿವರಾಗಿದ್ದಾಗ ಜಿಲ್ಲೆಯಲ್ಲಿ ಕೈಗೊಂಡಿರುವ ನೀರಾವರಿ ಕಾಮಗಾರಿ ಲಕ್ಷಾಂತರ ರೈತರ ಬದುಕು ಕಟ್ಟಿ ಕೊಟ್ಟಿದೆ. ಈಗಲೂ ಸಾವಿರಾರು ರೈತರ ಮನೆಯಲ್ಲಿ ಪಾಟೀಲರ ಪೋಟೋಗೆ ಪೂಜೆ ಸಲ್ಲಿಸುತ್ತಾರೆ.
ಹೀಗಾಗಿ ಅವರ ಋಣ ತೀರಿಸಲು ತಾವು ವೈಯಕ್ತಿಕವಾಗಿ ಕೃಷ್ಣ ಮೇಲ್ದಂಡೆ ಯೋಜನೆಯ ಕಾಮಗಾರಿ ಹೆದ್ದಾರಿಯಲ್ಲಿ ಅವರ ಪ್ರತಿಮೆ ಸ್ಥಾಪಿಸಲು ಯೋಚಿಸಿದ್ದೇನೆ. ಇದಕ್ಕೆ ಜಿಲ್ಲೆಯ ರೈತರ ಬೆಂಬಲ ಸಹ ಇದೆ ಎಂದರು.