ವಿಜಯಪುರ: ತುಬಚಿ-ಬಬಲೇಶ್ವರ ಏತ ನೀರಾವರಿ ಯೋಜನೆ 3600 ಕೋಟಿ ವೆಚ್ಚದಲ್ಲಿ 6.5 ನೀರು ಟಿಎಂಸಿ ಬಳಸಿ 1.33 ಲಕ್ಷ ಎಕರೆ ಪ್ರದೇಶಕ್ಕೆ ನೀರೊದಗಿಸಲು ಅಣಿಯಾಗಿದೆ. ನೀರಾವರಿ ಇಲಾಖೆ ಇತಿಹಾಸದಲ್ಲಿಯೇ ಹೊಸ ಅಧ್ಯಾಯ ಸೃಷ್ಠಿಸಲಿದೆ ಎಂದು ಗೃಹ ಸಚಿವ ಎಂ.ಬಿ.ಪಾಟೀಲ್ ಹೇಳಿದರು.
ಇಲ್ಲಿನ ಶೇಗುಣಶಿಯಲ್ಲಿ ಶ್ರೀ ಮಳಿಸಿದ್ದೇಶ್ವರ ಜಾತ್ರಾ ಮಹೋತ್ಸವ ಹಾಗೂ ದೇವಸ್ಥಾನದ ನೂತನ ಕಟ್ಟಡ ಉದ್ಘಾಟಿಸುವುದರ ಜೊತೆಗೆ ಕಳಸಾರೋಹಣ ನೆರವೇರಿಸಿ ಅವರು ಮಾತನಾಡಿದರು.
ನೀರಾವರಿ ಇಲಾಖೆ ಸಚಿವನಾಗಿದ್ದಾಗ ದೊರೆತ ಅವಕಾಶ ಸದ್ಬಳಕೆ ಮಾಡಿಕೊಂಡಿದ್ದೇನೆ. ವಿವಿಧ ಯೋಜನೆಗಳಿಂದ ಜಿಲ್ಲೆಯ 16 ಲಕ್ಷ ಎಕರೆ ಪ್ರದೇಶ ನೀರಾವರಿಗೆ ಒಳಪಡಿಸಿದೆ. 212 ಕೆರೆಗಳನ್ನು ತುಂಬಿಸುವ ನನ್ನ ಕನಸು ಸಾರ್ಥಕಗೊಳಿಸಿದ್ದೇನೆ ಎಂದರು.
ಜಿಲ್ಲೆಯ ಅತ್ಯಂತ ಎತ್ತರದ ಪ್ರದೇಶವಾಗಿದ್ದ ಕಾರಣಕ್ಕೆ ತಿಕೋಟಾ ಹೋಬಳಿ ಶಾಶ್ವತವಾಗಿ ನೀರಾವರಿ ಯೋಜನೆಯಿಂದ ವಂಚಿತವಾಗಿತ್ತು. ತುಬಚಿ-ಬಬಲೇಶ್ವರ ಯೋಜನೆ ರೂಪಿಸಿ 3600 ಕೋಟಿಯಷ್ಟು ಬೃಹತ್ ಅನುದಾನ ಒದಗಿಸಲಾಗಿತ್ತು. ದೀರ್ಘ ಕಾಲದ ಕನಸನ್ನು 3 ವರ್ಷಗಳಲ್ಲಿ ಪೂರ್ಣಗೊಳಿಸಿದ್ದೇನೆ. ಮುಂದಿನ 3 ತಿಂಗಳಲ್ಲಿ ರೈತರ ಜಮೀನಿಗೆ ನೀರು ಹರಿಯಲಿದೆ. ಇದು ರಾಜ್ಯದ, ರಾಷ್ಟ್ರದ ನೀರಾವರಿ ಇಲಾಖೆ ಇತಿಹಾಸದಲ್ಲಿ ಹೊಸ ಮೈಲಿಗಲ್ಲು ಸ್ಥಾಪಿಸಲಿದೆ ಎಂದರು.
ನೀರಾವರಿ, ಅಭಿವೃದ್ಧಿ ಕೆಲಸಕ್ಕೆ ವೋಟು ಹಾಕುತ್ತಾರೆಯೇ ಎಂದು ಪ್ರಶ್ನಿಸಿದ್ದವರಿಗೆ ಇಲ್ಲಿನ ಜನರೇ ಉತ್ತರ ನೀಡಿದ್ದಾರೆ. ಈ ಕ್ಷೇತ್ರದ ಜನ ಅಭಿವೃದ್ಧಿ ಪರವಾಗಿದ್ದೇವೆ ಎಂಬುದನ್ನು ಭಾರಿ ಬಹುಮತದಿಂದ ಬೆಂಬಲಿಸಿ ಸಾಬೀತು ಪಡಿಸಿದ್ದಾರೆ ಎಂದರು.
ಬಬಲೇಶ್ವರ ಕ್ಷೇತ್ರದ ನೀರಾವರಿ ಯೋಜನೆಗಳಿಂದ ಪ್ರತಿ 4ರಿಂದ 5ಹಳ್ಳಿಗೆ 5 ಸಾವಿರ ಟನ್ ಕಬ್ಬು ಬೆಳೆಯುವಷ್ಟು ನೀರು ದೊರೆಯಲಿದೆ. ಇದರಿಂದ ಕೈಗಾರಿಕೆಗಳಿಗೆ ವಿಫುಲ ಅವಕಾಶ ಸೃಷ್ಠಿಯಾಗಲಿದೆ ಎಂದರು.
ರಸ್ತೆ ಅಭಿವೃದ್ಧಿ: ಬಬಲೇಶ್ವರ-ಗಲಗಲಿ ರಸ್ತೆಯಿಂದ ವಿಜಯಪುರ-ಹುಬ್ಬಳ್ಳಿ ಎನ್.ಎಚ್-218ವರೆಗೆ, ಶೇಗುಣಶಿ-ಮಮದಾಪುರ-ದುಡಿಹಾಳ ಮಾರ್ಗವನ್ನು ಹೆದ್ದಾರಿ ಮಾದರಿಯಲ್ಲಿ ಅಭಿವೃದ್ಧಿ ಪಡಿಸಲಾಗುತ್ತಿದ್ದು, ಶೇಗುಣಶಿಯಿಂದ ದುಡಿಹಾಳವರೆಗೆ 16 ಕಿ.ಮೀ. ರಸ್ತೆಯನ್ನು 17.30 ಕೋಟಿ ರೂ. ವೆಚ್ಚದಲ್ಲಿ ಕಾಮಗಾರಿ ಕೈಗೊಳ್ಳಲು ಈಗಾಗಲೇ ಟೆಂಡರ್ ಕರೆಯಲಾಗಿದೆ.
ದುಡಿಹಾಳದಿಂದ 218 ರಾಷ್ಟ್ರೀಯ ಹೆದ್ದಾರಿಯವರೆಗೆ 5 ಕಿ.ಮೀ. ರಸ್ತೆಯನ್ನು 5 ಕೋಟಿ ವೆಚ್ಚದಲ್ಲಿ ಅಭಿವೃದ್ಧಿ ಪಡಿಸಲಾಗುತ್ತಿದೆ. ಒಟ್ಟು 21 ಕಿ.ಮೀ. ರಸ್ತೆಯನ್ನು ವಿಜಯಪುರ-ಗಲಗಲಿ ರಸ್ತೆಯಂತೆ ಹೆದ್ದಾರಿ ಮಾದರಿಯಲ್ಲಿ ನಿರ್ಮಿಸಲಾಗುವುದು ಎಂದರು.
ಮಮದಾಪುರ ವಿರಕ್ತಮಠದ ಅಭಿನವ ಮುರುಘೇಂದ್ರ ಸ್ವಾಮೀಜಿ, ಸಂಗಾಪುರ ಕಮರಿಮಠ ಸಿದ್ದಲಿಂಗ ಸ್ವಾಮಿಗಳು, ಖಾದಿ ಗ್ರಾಮದ್ಯೋಗ ಅಧ್ಯಕ್ಷ ಬಾಪುಗೌಡ ಪಾಟೀಲ್, ಅಪ್ಪುಗೌಡ ಪಾಟೀಲ್, ಡಾ. ಕೆ.ಎಚ್.ಮುಂಬಾರೆಡ್ಡಿ, ಕೃಷ್ಣಪ್ಪ ದೇಸಾಯಿ ಅರ್ಜುಣಗಿ, ಕೆ.ಎಂ.ಎಫ್ ನಿರ್ದೇಶಕ ಶ್ರೀಶೈಲಗೌಡ ಪಾಟೀಲ್, ಗ್ರಾ.ಪಂ. ಅಧ್ಯಕ್ಷ ಸಂಗವ್ವ ಹೊಸಮನಿ, ಎಪಿಎಂಸಿ ನಿರ್ದೇಶಕಿ ಸಾರವ್ವ ಪೂಜಾರಿ, ಭೀಮಪ್ಪ ಶಿವಗೊಂಡ, ಭೀಮಣ್ಣ ಬಡಿಗೇರ, ಮಲ್ಲಪ್ಪ ಪೂಜಾರಿ, ಮುತ್ತಪ್ಪ ವಾಲಿಕಾರ, ಸಾಬು ಪೂಜಾರಿ, ಕಾಶೆಪ್ಪ ಪೂಜಾರಿ ಮತ್ತಿತರರು ಉಪಸ್ಥಿತರಿದ್ದರು.