ವಿಜಯಪುರ: ಪ್ರತಿ ವರ್ಷ ಎಸ್ಎಸ್ಎಲ್ಸಿ, ಪಿಯುಸಿ ಫಲಿತಾಂಶ ಬಂದಾಗ ಪಟ್ಟಿಯಲ್ಲಿ ಕೊನೆಯ ಕೆಲ ಜಿಲ್ಲೆಗಳಲ್ಲಿ ವಿಜಯಪುರ ಕೂಡ ಕಾಣುತ್ತದೆ. ಇದನ್ನು ಹೋಗಲಾಡಿಸಿ ಪಟ್ಟಿಯಲ್ಲಿ ಮೊದಲ 10ರಲ್ಲಿ ಜಿಲ್ಲೆ ರಾರಾಜಿಸಬೇಕು ಎಂಬ ಸಂಕಲ್ಪದೊಂದಿಗೆ ಸಾರ್ವಜನಿಕ ಶಿಕ್ಷಣ ಇಲಾಖೆ ಕ್ರಿಯಾಯೋಜನೆ ಸಿದ್ದಪಡಿಸಿದೆ. 100 ದಿನಗಳ ಪಾಠವನ್ನು ವಿನೂತನವಾಗಿ ನಡೆಸಲು ಸಿದ್ಧತೆ ನಡೆಸಿದೆ.
ಮೊದಲು ಅಧ್ಯಾಪಕರಿಗೆ, ಮುಖ್ಯ ಶಿಕ್ಷಕರಿಗೆ ತರಬೇತಿ ನೀಡಲಾಗುತ್ತಿದೆ. ಜಿಲ್ಲೆಯ ಎಲ್ಲ ಶಾಲೆಯಲ್ಲಿ ಯಾವ ದಿನ ಯಾವ ವಿಷಯ ಬೋಧಿಸಬೇಕು. ಕಿರು ಪರೀಕ್ಷೆ, ಮೌಲ್ಯಮಾಪನ, ಫಲಿತಾಂಶ ಯಾವಾಗ ನೀಡಬೇಕು ಎನ್ನುವ ಚಾರ್ಟ್ ಸಿದ್ಧ ಪಡಿಸಿದ್ದಾರೆ. ಜಿಪಂ ಸಿಇಒ ಲಕ್ಷ್ಮೀಕಾಂತ ರೆಡ್ಡಿ ರಾಯಚೂರ ಜಿಲ್ಲೆಯಲ್ಲಿ ಪರೀಕ್ಷಾ ಫಲಿತಾಂಶದಲ್ಲಿ ಪ್ರಯೋಗ ಮಾಡಿ ಯಶಸ್ವಿಯಾದ ಕಾರಣ ಅದೇ ಮಾದರಿ ಪ್ರಶ್ನೆ ಪತ್ರಿಕೆ ತೆಗೆದುಕೊಂಡು ಅದನ್ನು ವಿಜಯಪುರ ಜಿಲ್ಲೆಯಲ್ಲಿ ಅಳವಡಿಸಿಕೊಳ್ಳಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ.
ಓದಿ: ಮುದ್ದೇಬಿಹಾಳ: ಪುರಸಭೆ ಕಾನೂನು ಸಲಹೆಗಾರರ ಬದಲಾವಣೆಗೆ ಆಕ್ರೋಶ, ಸದಸ್ಯರಿಂದ ಸಭಾತ್ಯಾಗ
ಕಳೆದ ವರ್ಷ ಬಂದಿರುವ ಫಲಿತಾಂಶದ ಆಧಾರದ ಮೇಲೆ ರೆಡ್, ಯೆಲ್ಲೋ ಹಾಗೂ ಗ್ರೀನ್ ಶಾಲೆಗಳನ್ನು ವಿಂಗಡಿಸಿದ್ದು, ಇದರಲ್ಲಿ ಶೇ 50ಕ್ಕಿಂತ ಕಡಿಮೆ ಫಲಿತಾಂಶ ಬಂದಿರುವ 96 ಶಾಲೆಗಳನ್ನು ಜಿಲ್ಲೆಯ ಶಿಕ್ಷಣ ಇಲಾಖೆಯ 39 ಅಧಿಕಾರಿಗಳು ಹಂಚಿಕೊಂಡು ದತ್ತು ಸ್ವೀಕರಿಸಿ ಸಂಪೂರ್ಣ ಜವಾಬ್ದಾರಿ ಹೊತ್ತುಕೊಂಡಿದ್ದಾರೆ. ಪ್ರತಿದಿನ ಒಂದು ಶಾಲೆಗೆ ತೆರಳಿ ಖುದ್ದು ಪಾಠ ಬೋಧಿಸುವದರ ಜತೆ ವಿದ್ಯಾರ್ಥಿಗಳ ಡೌಟ್ ಸಹ ನಿವಾರಣೆ ಮಾಡುವ ಯೋಜನೆ ಹಾಕಿಕೊಂಡಿದ್ದಾರೆ. ಅವರಿಗೆ ಮಾದರಿ ಪ್ರಶ್ನೆ ಪತ್ರಿಕೆಗಳನ್ನು ವಾಟ್ಸ್ಆ್ಯಪ್ ಮಾಡಿ ಮನೆಯಲ್ಲಿ ಪರೀಕ್ಷಾ ಸಿದ್ದತೆಗೆ ಅನುವು ಮಾಡಿಕೊಡುವ ಯೋಜನೆ ಸಿದ್ದಪಡಿಸಿದ್ದಾರೆ.