ವಿಜಯಪುರ: ಜಿಲ್ಲೆಯ ನಿಡಗುಂದಿ ತಾಲೂಕಿನ ಆಲಮಟ್ಟಿ ಜಲಾಶಯದ ಒಳಹರಿವಿನ ಪ್ರಮಾಣ ನಿತ್ಯ ಹೆಚ್ಚಾಗುತ್ತಿದ್ದು, ಇಂದು ಒಂದೇ ದಿನ 5.35 ಟಿಎಂಸಿ ಅಡಿಯಷ್ಟು ನೀರು ಸಂಗ್ರಹವಾಗಿದೆ.
ಶನಿವಾರ ಒಳಹರಿವು 57.356 ಕ್ಯೂಸೆಕ್ ಏರಿಕೆಯಾಗಿತ್ತು. ಇಂದು 62.520 ಕ್ಯೂಸೆಕ್ ನೀರು ಸಂಗ್ರಹವಾಗಿದೆ. ಶುಕ್ರವಾರ ಜಲಾಶಯದಲ್ಲಿ 39.90 ಟಿಎಂಸಿ ಅಡಿಯಷ್ಟು ನೀರು ಸಂಗ್ರಹವಿತ್ತು. ಶನಿವಾರ 44.90 ಟಿಎಂಸಿ ಅಡಿಗೆ ಹೆಚ್ಚಿದೆ. ಇಂದು 50.25 ಟಿಎಂಸಿ ಅಡಿಯಷ್ಟು ನೀರು ಸಂಗ್ರಹವಾಗಿದೆ ಎಂದು ತಿಳಿದುಬಂದಿದೆ.
ಹೊರ ಹರಿವಿನ ಪ್ರಮಾಣ ಯಥಾಸ್ಥಿತಿಯಲ್ಲಿದ್ದು 530 ಕ್ಯೂಸೆಕ್ ನೀರನ್ನು ಹರಿಬಿಡಲಾಗುತ್ತಿದೆ. ಜಲಾಶಯದ ಹಿನ್ನೀರಿನ ಬಳಕೆ ಹಾಗೂ ಎನ್ ಟಿ ಪಿ ಸಿ ವಿದ್ಯುತ್ ಘಟಕಕ್ಕೆ ಒಟ್ಟು 530 ಕ್ಯೂಸೆಕ್ ನೀರು ಬಳಕೆಯಾಗುತ್ತಿದೆ. ಕರ್ನಾಟಕಕ್ಕೆ ಸೇರುವ ರಾಜಾಪುರ ಬ್ಯಾರೇಜ್ ನಲ್ಲಿ 48.250 ಕ್ಯೂಸೆಕ್ ಒಳ ಹರಿವು ಇದ್ದು, ಇಂದು ಇನ್ನೂ 2 ಕ್ಯೂಸೆಕ್ ನೀರು ಹೆಚ್ಚಿಗೆ ಏರಿಕೆಯಾಗಿದೆ. ಆಲಮಟ್ಟಿ ಜಲಾಶಯದಲ್ಲಿ ಮುಂದಿನ 4 ನಾಲ್ಕು ದಿನಗಳಲ್ಲಿ ಮತ್ತೆ ಒಳಹರಿವು ಹೆಚ್ಚಾಗಲಿದೆ ಎಂದು ಕೆಬಿಜೆಎನ್ ಎಲ್ ಮೂಲಗಳು ತಿಳಿಸಿವೆ.
ಪ್ರತಿ ವರ್ಷ ಜುಲೈ 15 ನಂತರ ಜಲಾಶಯ ಭರ್ತಿಯಾಗುತ್ತಿತ್ತು. ಸದ್ಯದ ಪ್ರಮಾಣದಲ್ಲಿ ಆಲಮಟ್ಟಿ ಜಲಾಶಯಕ್ಕೆ ಒಳಹರಿವು ಮುಂದುವರೆದರೆ ಜುಲೈ ಮೊದಲು ವಾರ ಜಲಾಶಯ ಭರ್ತಿಯಾಗಬಹುದೆಂದು ಅಂದಾಜಿಸಲಾಗಿದೆ.