ಮುದ್ದೇಬಿಹಾಳ (ವಿಜಯಪುರ): ತಾಲೂಕಿನ ಗುಂಡಕರ್ಜಗಿ ಗ್ರಾಮಸ್ಥರಿಂದ ಕಟ್ಟಿಸಲ್ಪಟ್ಟ ಅಂಚೆ ಕಚೇರಿಯನ್ನು ವಿಜಯಪುರ ಅಂಚೆ ಉಪ ವಿಭಾಗದ ನಿರೀಕ್ಷಕ ಕೃಷ್ಣಾ ಸಂಕರಟ್ಟಿ ಉದ್ಘಾಟಿಸಿದರು.
![Inauguration of post office built by villagers in Gundakarjagi](https://etvbharatimages.akamaized.net/etvbharat/prod-images/kn-muddebihal-postofficeopning-26-2-kac10030_26102020175058_2610f_1603714858_138.jpeg)
ಈ ವೇಳೆ ಮಾತನಾಡಿದ ಅವರು, ಗುಂಡಕರ್ಜಗಿ ಗ್ರಾಮಸ್ಥರು ಅಂಚೆ ಕಚೇರಿಗೆ ಸ್ಥಳಾವಕಾಶ, ಹಣ, ಕಟ್ಟಡದ ಸಾಮಗ್ರಿ ಸೇರಿದಂತೆ ಎಲ್ಲ ರೂಪದ ಸಹಕಾರ ನೀಡಿ ಶಾಶ್ವತ ಕಟ್ಟಡ ನಿರ್ಮಿಸಿಕೊಟ್ಟು ಮಾದರಿ ಕಾರ್ಯ ಮಾಡಿದ್ದಾರೆ. ಗ್ರಾಮೀಣ ಪ್ರದೇಶದಲ್ಲಿ ಅಂಚೆ ಕಚೇರಿಯ ಅವಶ್ಯಕತೆ ಮೊದಲಿಂದಲೂ ಬಹಳಷ್ಟಿದೆ. ಸಾಂಪ್ರದಾಯಿಕ ಸೇವೆ ಪತ್ರ ವಿತರಣೆಯ ಜೊತೆಗೆ ಈಗ ಸರ್ಕಾರದ ಮಾನವೀಯ ಸೇವೆಗಳಾದ ವೃದ್ಧಾಪ್ಯ ವೇತನ, ವಿಕಲಚೇತನರ ವೇತನ, ವಿಧವಾ ವೇತನ ಸೇರಿದಂತೆ ಸಾಮಾಜಿಕ ಭದ್ರತಾ ಯೋಜನೆಯ ವೇತನಗಳನ್ನು ಅರ್ಹರಿಗೆ ಮುಟ್ಟಿಸುವ ಕೆಲಸವನ್ನು ಇಲಾಖೆ ಮಾಡಿಕೊಂಡು ಬಂದಿದೆ. ಜನತೆ ಅಂಚೆ ಇಲಾಖೆ ಮೇಲೆ ವಿಶ್ವಾಸವಿಟ್ಟು ತಮ್ಮ ಉಳಿತಾಯದ ಹಣವನ್ನು ಇಲಾಖೆಯ ವಿವಿಧ ಯೋಜನೆಗಳಲ್ಲಿ ಹಣ ತೊಡಗಿಸಬೇಕು ಎಂದು ಮನವಿ ಮಾಡಿದರು.
ಅಂಚೆ ಕಚೇರಿಯ ಖಜಾಂಚಿ ಎಂ.ಎಸ್.ಗಡೇದ ಮಾತನಾಡಿ, ಕೊರೊನಾ ಸಂಕಷ್ಟದ ಸಮಯದಲ್ಲಿ ಅಂಚೆ ಇಲಾಖೆ ಎಲ್ಲ ಬಡವರ ಮನೆ ಬಾಗಿಲಿಗೆ ತೆರಳಿ ತನ್ನ ಮಾನವೀಯ ಸೇವೆ ನೀಡಿದೆ. ಸರ್ಕಾರ ಹಾಗೂ ಜನತೆಯ ಮಧ್ಯೆ ಕೊಂಡಿಯಾಗಿ ಕೆಲಸ ಮಾಡಿದೆ. ಅಂಚೆ ಇಲಾಖೆ ಕಾಲಮಾನಕ್ಕೆ ತಕ್ಕಂತೆ ತನ್ನ ಸೇವೆಯಲ್ಲಿ ಸಹ ಬದಲಾವಣೆ ಮಾಡಿಕೊಂಡು ಜನತೆಗೆ ಅವಶ್ಯಕ ಸೇವೆ ನೀಡುವಲ್ಲಿ ಬದ್ಧವಾಗಿದೆ ಎಂದರು.