ವಿಜಯಪುರ : ನನ್ನ ಹೇಳಿಕೆಯಿಂದ ಪಕ್ಷಕ್ಕೆ ಮುಜುಗರವಾಗುತ್ತಿದೆ ಎಂಬ ಕಾರಣ ನೀಡಿ ಕೇಂದ್ರ ನಾಯಕರು ನನಗೆ ಶೋಕಾಸ್ ನೋಟಿಸ್ ನೀಡಿದ್ದಾರೆ ಎಂದು ಮಾಧ್ಯಮಗಳಲ್ಲಿ ಗಮನಿಸಿದ್ದೇನೆ ಹೊರತು, ನನ್ನ ಕೈಗೆ ಯಾವುದೇ ನೋಟಿಸ್ ಸಿಕ್ಕಿಲ್ಲ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ.
ವಿಜಯಪುರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕೇವಲ ನೋಟಿಸ್ ಜಾರಿಯಾಗಿದೆ ಎಂದು ಮಾಧ್ಯಮದವರು ದಿನಬೆಳಗಾದರೆ ಹೇಳುತ್ತಿದ್ದಾರೆ. ಹಾಗಿದ್ದರೆ ನೀವೇ ಅದರ ಪ್ರತಿ ಕೊಡಿ ಎಂದು ಮರು ಪ್ರಶ್ನಿಸಿದ ಅವರು, ನೋಟಿಸ್ ನೀಡಿದರೆ ತಕ್ಷಣ ಉತ್ತರ ನೀಡಲು ನಾನು ಈಗಾಗಲೇ ಸಿದ್ಧತೆ ಮಾಡಿಕೊಂಡಿದ್ದೇನೆ ಎಂದು ಕೇಂದ್ರ ನಾಯಕರ ವಿರುದ್ಧವೂ ಚಾಟಿ ಬೀಸಿದರು.
ಮತ್ತೆ ಭದ್ರತೆ : ಮುಖ್ಯಮಂತ್ರಿ ವಿರುದ್ಧ ಪದೇಪದೆ ಹೇಳಿಕೆ ನೀಡುತ್ತಿದ್ದ ಬಿಜೆಪಿ ರೆಬೆಲ್ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರಿಗೆ ನೀಡಿದ್ದ ಭದ್ರತೆ ವಾಪಸ್ ತೆಗೆದುಕೊಂಡ ಬೆನ್ನಲ್ಲೇ, ಈಗ ಪೊಲೀಸ್ ಭದ್ರತೆ ನೀಡಲಾಗಿದೆ. ಈ ಕುರಿತು ಪ್ರತಿಕ್ರಿಯಿಸಿರುವ ಯತ್ನಾಳ್, ಸರ್ಕಾರ ಹಿಂಪಡೆದಿರಬಹುದು.
ಆದರೆ, ಒಬ್ಬ ಜನಪ್ರತಿನಿಧಿಗೆ ಜೀವ ಬೆದರಿಕೆ ಇದೆ ಅಂದರೆ, ಅವರ ಪ್ರಾಣದ ಜತೆ ಚೆಲ್ಲಾಟವಾಡಲು ಪೊಲೀಸ್ ಇಲಾಖೆ ಸಿದ್ಧವಿರಲ್ಲ. ಹೀಗಾಗಿ, ಎರಡು ದಿನಗಳ ಹಿಂದೆ ತಮಗೆ ಪೊಲೀಸ್ ಭದ್ರತೆ ನೀಡಲಾಗಿದೆ ಎಂದರು.
ಓದಿ:ಸಿಎಂ ನಿವಾಸದಲ್ಲಿ ಹಾವು ಚೇಳುಗಳು ಹೆಚ್ಚಾಗಿವೆ: ಕುಟುಂಬ ರಾಜಕಾರಣದ ವಿರುದ್ಧ ಯತ್ನಾಳ್ ಕಿಡಿ
ಸಿಎಂ ಪುತ್ರ ಹೇಳಿದ್ದಾನೆ ಎಂದು ಯಾರದೋ ಜೀವ ಬಲಿ ಕೊಡೋಕೆ ಪೊಲೀಸ್ ಇಲಾಖೆ ಒಪ್ಪಲ್ಲ. ಪೊಲೀಸ್ ಇಲಾಖೆ ಸ್ವತಂತ್ರವಾಗಿ ವಿವಿಐಪಿಗಳಿಗೆ ಭದ್ರತೆ ನೀಡುತ್ತದೆ. ಪುನಃ ಪೊಲೀಸ್ ಭದ್ರತೆ ನೀಡಿದ್ದಕ್ಕೆ ಪೊಲೀಸ್ ಇಲಾಖೆಗೆ ಧನ್ಯವಾದಗಳನ್ನು ತಿಳಿಸುತ್ತೇನೆ ಎಂದರು.