ವಿಜಯಪುರ: ನಾನು ಸಚಿವ ಸ್ಥಾನದ ಆಕಾಂಕ್ಷಿಯಲ್ಲ. ಒಂದು ವೇಳೆ ಪಕ್ಷ ಆ ಸ್ಥಾನ ನನಗೆ ಕೊಟ್ಟರೆ ನಿಭಾಯಿಸುವ ಸಾಮರ್ಥ್ಯ ಇದೆ. ಇನ್ನೂ ಬಹುತೇಕ ಸಚಿವ ಸ್ಥಾನಗಳು ಹಂಚಿಕೆಯಾಗಿಲ್ಲ. ಮುಂದಿನ ದಿನಗಳಲ್ಲಿ ಸೂಕ್ತ ಸ್ಥಾನ ಸಿಗಬಹುದು ಎಂಬ ನಿರೀಕ್ಷೆಯಿದೆ ಎಂದು ವಿಧಾನ ಪರಿಷತ್ ಸದಸ್ಯ ಅರುಣ್ ಶಹಾಪುರ್ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿಜಯಪುರ ಜಿಲ್ಲಾ ರಾಜಕಾರಣದಲ್ಲಿ ಯಾವುದೇ ಗುಂಪುಗಾರಿಕೆಗಳಿಲ್ಲ. ಅವರವರ ಅಭಿಪ್ರಾಯಗಳು ಬೇರೆ ಬೇರೆಯಾಗಿವೆ. ನಗರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ರಾಷ್ಟ್ರ ಮಟ್ಟದ ನಾಯಕರು. ಆ ಮಟ್ಟದಲ್ಲಿಯೇ ಅವರ ಕುರಿತು ಚರ್ಚೆಗಳಾಗಬೇಕು. ಅವರ ಬಗ್ಗೆ ನಾನು ಏನು ಹೇಳಲ್ಲ ಎಂದು ವ್ಯಂಗ್ಯವಾಡಿದರು.
ಇದೇ ಸಂದರ್ಭದಲ್ಲಿ ಅಧಿವೇಶನ ಸ್ಥಳಾಂತರ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಅಧಿವೇಶನವನ್ನು ಬೆಳಗಾವಿಯಲ್ಲಿ ಮಾಡೋದ್ರಿಂದ ಒಳ್ಳೆಯದಾಗುವುದಾದರೆ, ಅದನ್ನು ಬೆಳಗಾವಿಯಲ್ಲಿಯೇ ಮಾಡಲು ನಾವು ಕೂಡಾ ಹೇಳುತ್ತೇವೆ. ಪ್ರವಾಹದ ಸಂದರ್ಭದಲ್ಲಿ ಬೆಳಗಾವಿಯಲ್ಲಿ ಮಾಡುವುದು ಬೇಡ ಎಂಬ ವಿಚಾರ ಅಷ್ಟೇ. ಆಡಳಿತದ ವಿಚಾರದಲ್ಲಿ ಅಧಿಕಾರಿಗಳಿಗೆ ತೊಂದರೆ ಆಗುತ್ತೆ ಎಂಬ ಕಾರಣಕ್ಕೆ ಸ್ಥಳಾಂತರ ಮಾಡಿರಬಹುದು. ಇನ್ನೂ ಸಮಯವಿದೆ ನಾನು ಕೂಡಾ ಇದನ್ನು ಪಕ್ಷದ ಮುಖಂಡರ ಗಮನಕ್ಕೆ ತರುವೆ ಎಂದರು.