ವಿಜಯಪುರ: ಜಿಲ್ಲೆಗೆ ಅಂಟಿಕೊಂಡಿದ್ದ ಬರದ ನಾಡು ಎಂಬ ಹಣೆಪಟ್ಟಿ ಈಗ ಬದಲಾಗಿದ್ದು, ಕೆಲ ವರ್ಷಗಳಿಂದ ಅತಿವೃಷ್ಠಿಗೆ ಸಿಲುಕಿ ಅನ್ನದಾತ ಬೆಳೆ ಕಳೆದುಕೊಳ್ಳುತ್ತಿದ್ದಾನೆ. ಈ ಬಾರಿ ಉಂಟಾದ ಪ್ರವಾಹದಿಂದ ನದಿ ಪಾತ್ರದ ಜನರಿಗೆ ಅಪಾಯ ಬಂದೊದಗಿದೆ.
ಜಿಲ್ಲೆಯಲ್ಲಿ ಕೃಷ್ಣಾ, ಭೀಮಾ ಹಾಗೂ ಡೋಣಿ ನದಿಗಳು ಹರಿಯುತ್ತಿವೆ. ವಿಜಯಪುರವನ್ನು ಸಂಪೂರ್ಣ ನೀರಾವರಿಗೆ ಒಳಪಡಿಸಬೇಕು ಎಂಬ ಉದ್ದೇಶದಿಂದ ಹಿಂದಿನ ಜಲಸಂಪನ್ಮೂಲ ಸಚಿವ ಎಂ.ಬಿ.ಪಾಟೀಲ್ ಅವರು ಕೆರೆ, ಕಟ್ಟೆ, ಬಾಂದಾರಗಳು, ಐತಿಹಾಸಿಕ ಬಾವಡಿಗಳನ್ನು ಪುನಶ್ಚೇತನಗೊಳಿಸಿ ಅವುಗಳನ್ನು ತುಂಬುವ ಕೆಲಸ ಮಾಡಿದ್ದರು.
ಈ ವರ್ಷ ಅತಿಯಾದ ಮಳೆಯಿಂದ ಜಿಲ್ಲೆಯ 156ರ ಪೈಕಿ 110 ಕೆರೆಗಳು ಶೇ.70ರಷ್ಟು ಹಾಗೂ 46 ಕೆರೆಗಳು ಶೇ.30ರಷ್ಟು ಭರ್ತಿಯಾಗಿವೆ. ಇದರಿಂದ ರೈತರಿಗೆ ನೀರಾವರಿ ಸೌಲಭ್ಯ ದೊರೆತಿದೆ. ಜೊತೆಗೆ ಅಂತರ್ಜಲ ಮಟ್ಟ ಸಹ ಹೆಚ್ಚಾಗಿದೆ. ಬಾಂದಾರಗಳಿಗೆ ಗೇಟ್ ಅಳವಡಿಸುವ ಮೂಲಕ ನೀರು ಸಂಗ್ರಹ ಕೆಲಸ ಮಾಡಲಾಗುತ್ತಿದೆ.
ಅತಿಯಾದ ಮಳೆ ಹಾಗೂ ನೀರು ಸಂಗ್ರಹಕ್ಕೆ ನಿರ್ಮಿಸಿರುವ ಬಾಂದಾರ, ಕೆರೆಗಳು ಸಹ ಅಪಾಯ ತರುತ್ತವೆ ಎನ್ನುವುದಕ್ಕೆ ಜಿಲ್ಲೆಯ ಡೋಣಿ ನದಿ ಉದಾಹರಣೆಯಾಗಿದೆ. ಸ್ವಲ್ಪ ಮಳೆಯಾದರೆ ನದಿ ತುಂಬಿ ಹರಿಯುತ್ತದೆ. ಆದರೆ, ಜನ ನದಿಪಾತ್ರದಲ್ಲಿ ಅತಿಕ್ರಮಿಸಿ ಹೊಲ, ಗದ್ದೆ, ತೋಟಗಳಾಗಿ ಪರಿವರ್ತಿಸಿಕೊಂಡಿದ್ದಾರೆ. ಈ ಪರಿಣಾಮ ಅತಿಯಾದ ಮಳೆಯಾದರೆ ಡೋಣಿ ನದಿ ತನ್ನ ವ್ಯಾಪ್ತಿ ಬದಲಿಸಿ ಅಡ್ಡಾದಿಡ್ಡಿ ಹರಿಯುವ ಕಾರಣ ಅನ್ನದಾತ ಬೆಳೆದ ಬೆಳೆ ನೀರು ಪಾಲಾಗುತ್ತಿದೆ. 30 ವರ್ಷದಿಂದ ಹೊಳೆತ್ತದಿರುವುದು ಅದಕ್ಕೆ ಕಾರಣ ಎಂಬುದು ನದಿ ಪಾತ್ರದ ರೈತರ ಆರೋಪವಾಗಿದೆ.
10-15 ವರ್ಷಕ್ಕೊಮ್ಮೆ ಬರುವ ಪ್ರವಾಹದಿಂದ ಆಗುವ ನಷ್ಟ ತಡೆಯಲು ಅಧಿಕಾರಿಗಳು ಯೋಜನೆ ರೂಪಿಸುತ್ತಿಲ್ಲ. ಪ್ರವಾಹ ಬಂದಾಗ ನಷ್ಟದ ಅಂದಾಜು ಮಾಡಲಾಗುತ್ತದೆ. ರೈತರಿಗೆ ಅಷ್ಟಿಷ್ಟು ಪರಿಹಾರ ನೀಡಿ ಸಮಾಧಾನ ಮಾಡುವ ಕೆಲಸ ಮಾಡುತ್ತಿದ್ದಾರೆ. ಅದರ ಬದಲು ಶಾಶ್ವತ ಪರಿಹಾರ ಕಂಡುಕೊಳ್ಳಲು ಮುಂದಾದರೆ ಮುಂದೆ ರೈತರು ಅಂತಹ ಪ್ರಮಾದಗಳಿಗೆ ತುತ್ತಾಗುವುದಿಲ್ಲ ಎಂಬುದನ್ನು ಅಧಿಕಾರಿಗಳು ಅರಿಯಬೇಕಿದೆ.