ವಿಜಯಪುರ : ಬಿಜೆಪಿಯ ಎಲ್ಲಾ ಶಾಸಕರಿಗೆ ಸಿಎಂ ಆಗಬೇಕು ಎನ್ನವ ಬಯಕೆ ಇದೆ. ಅದೇನು ಸಂತೆಯಲ್ಲಿ ಸಿಗುವ ಬದನೆಕಾಯಿ ಏನು ಎಂದು ಮಾಜಿ ಸಚಿವ ಡಾ. ಹೆಚ್ ಸಿ ಮಹದೇವಪ್ಪ ತೀಕ್ಷಣವಾಗಿ ಪ್ರತಿಕ್ರಿಯೆ ನೀಡಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿಎಂ ಸ್ಥಾನ ಅದೊಂದು ಸಂವಿಧಾನಾತ್ಮಕ ಹುದ್ದೆ. ಅದಕ್ಕೆ ಅದರದ್ದೇ ಆದ ಕಾನೂನು ಚೌಕಟ್ಟಿದೆ. ಆ ಸ್ಥಾನದಲ್ಲಿ ಕುಳಿತುಕೊಳ್ಳಲು ಒಂದು ವ್ಯಕ್ತಿತ್ವ, ಘನತೆ ಇರಬೇಕು. ಅದು ವ್ಯಕ್ತಿತ್ವವನ್ನು ನಿರ್ಮಾಣ ಮಾಡುತ್ತದೆ. ಆ ಸ್ಥಾನಕ್ಕೆ ಹೋದಾಗ ಒಂದು ಚರಿತ್ರೆ ನಿರ್ಮಾಣ ಮಾಡಬೇಕು ಎಂದರು.
ಇಂದು ಯಾವ ಹಿನ್ನೆಲೆ ಇರದ ಅನೇಕರು ಹಣ, ಜಾತಿ ಹಾಗೂ ತೋಳಬಲ ಮೂಲಕ ರಾಜಕೀಯ ನಿಯಂತ್ರಣಕ್ಕೆ ಹೊರಟಿದ್ದಾರೆ. ಅದು ಪ್ರಜಾಪ್ರಭುತ್ವಕ್ಕೆ ಮಾರಕ. ಈ ಮೂಲಕ ಪ್ರಜಾಪ್ರಭುತ್ವ ನಾಶವಾಗುತ್ತದೆ. ಇವರ ಈ ನಡುವಳಿಕೆಯಿಂದ ಪ್ರಜಾಪ್ರಭುತ್ವ ಇಲ್ಲದೆ ಹೋದರೆ ಜನ ಸಾಮಾನ್ಯರು ನಾಯಿಗಳಂತೆ ಬದುಕಬೇಕಾಗುತ್ತದೆ ಎಂದು ಆತಂಕ ವ್ಯಕ್ತಪಡಿಸಿದರು.
ಓದಿ: ಹೆದರಿಸಿ ಯಡಿಯೂರಪ್ಪನಿಂದ ರಾಜೀನಾಮೆ ಕೊಡಿಸಿದ್ದಾರೆ : ವಿಪಕ್ಷ ನಾಯಕ ಸಿದ್ದರಾಮಯ್ಯ
ದಲಿತ ಸಿಎಂ ವಿಚಾರ : ಇದೇ ವೇಳೆ ದಲಿತ ಸಿಎಂ ವಿಚಾರವಾಗಿ ಮಾತನಾಡಿದ ಅವರು, ದಲಿತ ಸಿಎಂ, ಹಿಂದುಳಿದ ಸಿಎಂ ಎನ್ನುವುದು ಯಾವುದು ಇಲ್ಲ. ಸಿಎಂ ಮಾಡುವುದು ಆ ಪಕ್ಷದ ಶಾಸಕರಿಗೆ ಬಿಟ್ಟಿದ್ದು, ಅವರ ಅಭಿಪ್ರಾಯ ಸಂಗ್ರಹಿಸಬೇಕು. ಕಾಂಗ್ರೆಸ್ ಸೇರಿದಂತೆ ಎಲ್ಲಾ ಪಕ್ಷಗಳು ದಲಿತರ ಮನಸ್ಸು ಒಡೆದು ಇವರನ್ನು ಅಧಿಕಾರಕ್ಕೆ ತರಬಾರದು ಎನ್ನುವ ಹುನ್ನಾರ ಅಡಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.