ವಿಜಯಪುರ: ರಾಜ್ಯದಲ್ಲಿ ಹಿಜಾಬ್ ಹಾಗೂ ಕೇಸರಿ ಶಾಲು ವಿವಾದ ಭುಗಿಲೆದ್ದಿದ್ದು, ಈಗಾಗಲೇ ಪ್ರಕರಣ ರಾಜಕೀಯ ರೂಪ ಪಡೆದುಕೊಂಡಿದ್ದು, ಕೆಲವೊಂದು ಜಿಲ್ಲೆಗಳಲ್ಲಿ ಅಹಿತಕರ ಘಟನೆ ಸಹ ನಡೆದಿವೆ. ಇದೇ ಕಾರಣಕ್ಕಾಗಿ ಮೂರು ದಿನಗಳ ಕಾಲ ಶಾಲಾ-ಕಾಲೇಜ್ಗಳಿಗೆ ರಜೆ ಘೋಷಣೆ ಮಾಡಲಾಗಿದೆ. ಇದರ ಮಧ್ಯೆ ಕೂಡ ವಿಜಯಪುರದ ಕಾಲೇಜ್ವೊಂದರಲ್ಲಿ ಪ್ರಾಯೋಗಿಕ ಪರೀಕ್ಷೆ ನಡೆಸಲಾಗಿದೆ.
ಜಿಲ್ಲೆಯ ಇಂಡಿ ಪಟ್ಟಣದ ಗುರುಬಸವ ವಿಜ್ಞಾನ ಮಹಾವಿದ್ಯಾಲಯದಲ್ಲಿ ಪ್ರಾಯೋಗಿಕ ಪರೀಕ್ಷೆ ನಡೆಸಲಾಗಿದ್ದು, ಕಾಲೇಜಿನ ಹೊರಗಡೆ ವ್ಯಾಪಕ ಪೊಲೀಸ್ ಬಂದೋಬಸ್ತ್ ಆಯೋಜಿಸಲಾಗಿತ್ತು. ವಿಜ್ಞಾನ ಪದವಿ ವಿಭಾಗದ ವಿವಿಧ ವಿಷಯಗಳ ಮೂರನೇ ಹಾಗೂ ಐದನೇ ಸೆಮಿಸ್ಟರ್ ಪ್ರಾಯೋಗಿಕ ಪರೀಕ್ಷೆ ನಡೆಸಲಾಗಿದೆ. ನಿನ್ನೆಯಿಂದ ಫೆಬ್ರುವರಿ 15ರವರೆಗೂ ಪರೀಕ್ಷೆ ನಡೆಯಲಿವೆ.
ಹಿಜಾಬ್-ಕೇಸರಿ ಶಾಲು ವಿವಾದ ಕಾರಣದಿಂದಾಗಿ ಪೊಲೀಸರಿಂದ ವಿದ್ಯಾರ್ಥಿಗಳ ತಪಾಸಣೆ ನಡೆಸಲಾಯಿತು. ಹಿಜಾಬ್ ಹಾಗೂ ಕೇಸರಿ ಶಾಲು ಧರಿಸಿ ಕಾಲೇಜಿಗೆ ಹೋಗದಂತೆ ತಪಾಸಣೆ ನಡೆಸಲಾಗಿದ್ದು, ಕಾಲೇಜಿನ ವಾಹನ ಹಾಗೂ ಇತರೆ ವಾಹನಗಳಲ್ಲಿ ಆಗಮಿಸಿದ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದಾರೆ. ಪರೀಕ್ಷೆಗೆ ಹಾಜರಾಗಿರುವ ವಿದ್ಯಾರ್ಥಿಗಳಿಗೆ ಹಿಜಾಬ್ ಹಾಗೂ ಕೇಸರಿ ಶಾಲು ನಿಷೇಧ ಮಾಡಲಾಗಿತ್ತು.
ಕಾಲೇಜು ಆಡಳಿತ ಮಂಡಳಿಯಿಂದ ಕಟ್ಟು ನಿಟ್ಟಿನ ಕ್ರಮ ಸಹ ಕೈಗೊಳ್ಳಲಾಗಿತ್ತು. ಹಿಜಾಬ್ ಹಾಗೂ ಕೇಸರಿ ಶಾಲು ವಿವಾದದ ಕಾರಣ ಪ್ರಾಯೋಗಿಕ ಪರೀಕ್ಷೆಗಳಿಗೆ ತೊಂದರೆ ಆಗಬಾರದೆಂಬ ನಿಟ್ಟಿನಲ್ಲಿ ಸೂಕ್ತ ಕ್ರಮ ಕೈಗೊಳ್ಳಲಾಗಿತ್ತು.