ಬೆಂಗಳೂರು: ವಿಜಯಪುರ ಪುರಸಭೆಯ ವಾರ್ಡ್‌ವಾರು ಮೀಸಲಾತಿಯನ್ನು ‘ರಿಡು’ (ಮರುನಿಗದಿ) ಮಾಡುವ ಬಗ್ಗೆ ಮರು ಪರಿಶೀಲಿಸುವಂತೆ ಹೈಕೋರ್ಟ್ ಏಕಸದಸ್ಯ ಪೀಠ ನೀಡಿದ್ದ ಆದೇಶಕ್ಕೆ ವಿಭಾಗೀಯ ಪೀಠ ತಡೆಯಾಜ್ಞೆ ನೀಡಿದೆ.
ಏಕಸದಸ್ಯ ಪೀಠದ ಆದೇಶ ಪ್ರಶ್ನಿಸಿ ರಾಜ್ಯ ಚುನಾವಣಾ ಆಯೋಗ ಸಲ್ಲಿಸಿದ್ದ ಮೇಲ್ಮನವಿ ವಿಚಾರಣೆ ನಡೆಸಿದ ನ್ಯಾ. ಸತೀಶ್ ಚಂದ್ರ ಶರ್ಮಾ ನೇತೃತ್ವದ ವಿಭಾಗೀಯ ಪೀಠ ಈ ಆದೇಶ ನೀಡಿದೆ.
ಇದರಿಂದಾಗಿ ವಿಜಯಪುರ ಪುರಸಭೆ ಚುನಾವಣೆಗೆ ಎದುರಾಗಿದ್ದ ಕಾನೂನು ಅಡ್ಡಿ ನಿವಾರಣೆಯಾಗಿದೆ. ಪೀಠ ತನ್ನ ಆದೇಶದಲ್ಲಿ ‘ಈಗಾಗಲೇ ಚುನಾವಣಾ ವೇಳಾಪಟ್ಟಿ ಪ್ರಕಟವಾಗಿ, ಚುನಾವಣೆ ಪ್ರಕ್ರಿಯೆಗಳು ಚಾಲನೆಯಲ್ಲಿವೆ.
ಈ ಹಂತದಲ್ಲಿ ನ್ಯಾಯಾಲಯದ ಮಧ್ಯಪ್ರವೇಶ ಸಮಂಜಸವಲ್ಲ. ಅಲ್ಲದೇ, ಚುನಾವಾಣಾ ಆಯೋಗ ಸೇರಿದಂತೆ ಯಾವ ಪ್ರತಿವಾದಿಗೂ ಆಕ್ಷೇಪಣೆ ಸಲ್ಲಿಸಲು ಅವಕಾಶ ನೀಡದೆ ಏಕಸದಸ್ಯ ಪೀಠ ಆದೇಶ ನೀಡಿದೆ. ಆದ್ದರಿಂದ ಏಕಸದಸ್ಯ ಪೀಠದ ಆದೇಶಕ್ಕೆ ತಡೆಯಾಜ್ಞೆ ನೀಡಲಾಗುತ್ತಿದ್ದು, ನಿಗದಿಯಂತೆ ಚುನಾವಣಾ ಪ್ರಕ್ರಿಯೆ ಮುಂದುವರಿಯಲಿ ಎಂದು ತಿಳಿಸಿದೆ.
ವಿಚಾರಣೆ ವೇಳೆ ಚುನಾವಣಾ ಆಯೋಗದ ಪರ ವಕೀಲ ಕೆ.ಎನ್. ಫಣೀಂದ್ರ ವಾದಿಸಿ, ಆಯೋಗ ಒಮ್ಮೆ ಚುನಾವಣಾ ವೇಳಾಪಟ್ಟಿ ಪ್ರಕಟಿಸಿದ ಮೇಲೆ ನ್ಯಾಯಾಲಯದ ಮಧ್ಯಪ್ರವೇಶಕ್ಕೆ ಅವಕಾಶವಿಲ್ಲ. ಈ ಅಂಶವನ್ನು ಏಕಸದಸ್ಯ ಪೀಠ ಪರಿಗಣಿಸಿಲ್ಲ.
ವಿಜಯಪುರ ಪುರಸಭೆ ಸೇರಿದಂತೆ ರಾಜ್ಯದ ಕೆಲ ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಗಳಿಗೆ ರಾಜ್ಯ ಚುನಾವಣಾ ಆಯೋಗ ಮಾ.29ರಂದು ವೇಳಾಪಟ್ಟಿ ಪ್ರಕಟಿಸಿದೆ. ಈ ಹಂತದಲ್ಲಿ ಮೀಸಲಾತಿ ಮರು ನಿಗದಿ ಮಾಡಿದರೆ ಚುನಾವಣಾ ಪ್ರಕ್ರಿಯೆ ಮೇಲೆ ಪರಿಣಾಮ ಬೀರುತ್ತದೆ ಎಂದು ವಿವರಿಸಿದರು.
ಪ್ರಕರಣದ ಹಿನ್ನೆಲೆ:
ಬೆಂಗಳೂರು ಗ್ರಾಮಾಂತರ ವಿಜಯಪುರ ಪುರಸಭೆಯ ವಾರ್ಡ್‌ವಾರು ಮೀಸಲು ಅಂತಿಮ ಅಧಿಸೂಚನೆಯನ್ನು 2021ರ ಮಾ.16ರಂದು ಪ್ರಕಟಿಸಲಾಗಿತ್ತು.
ಇದನ್ನು ಪ್ರಶ್ನಿಸಿ ಕೆಲವರು ಮಾ.20ರಂದು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಈ ಮಧ್ಯೆ, ಚುನಾವಣಾ ಆಯೋಗ ಮಾ.29ರಂದು ವೇಳಾಪಟ್ಟಿ ಪ್ರಕಟಿಸಿತ್ತು.
ಅರ್ಜಿ ವಿಚಾರಣೆ ನಡೆಸಿದ ನ್ಯಾ. ಆರ್. ದೇವದಾಸ್ ಅವರಿದ್ದ ಏಕಸದಸ್ಯ ಪೀಠ, ಮಾ.29ರ ಆಯೋಗದ ಅಧಿಸೂಚನೆ, ಚುನಾವಣಾ ವೇಳಾಪಟ್ಟಿಯ ಆರಂಭವಲ್ಲ ಎಂದು ಅಭಿಪ್ರಾಯಪಟ್ಟು, ಏ.6ರೊಳಗೆ ಮೀಸಲನ್ನು ‘ರಿಡು’ ಮಾಡುವಂತೆ ಆದೇಶಿಸಿತ್ತು. ಇದನ್ನು ಪ್ರಶ್ನಿಸಿ ಚುನಾವಣಾ ಆಯೋಗ ಮೇಲ್ಮನವಿ ಸಲ್ಲಿಸಿತ್ತು.