ಮುದ್ದೇಬಿಹಾಳ: ನಗರದಲ್ಲಿ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಮುದ್ದೇಬಿಹಾಳ ರಸ್ತೆಗೆ ಹೊಂದಿಕೊಂಡಿರುವ ರೈತನೊಬ್ಬನ ಹೊಲಕ್ಕೆ ಚರಂಡಿ ನೀರು ನುಗ್ಗಿ ಅಪಾರ ಪ್ರಮಾಣದ ಬಾಳೆ ಬೆಳೆ ನಷ್ಟವಾಗಿದೆ.
ತಾಲೂಕಿನ ನಾಲತವಾಡದ ರೈತ ವೀರೇಶ ಮಲ್ಲಪ್ಪ ಗಂಗನಗೌಡರ ಅವರಿಗೆ ಸೇರಿದ ಬಾಳೆ ತೋಟದಲ್ಲಿ ಚರಂಡಿ ನೀರಿನ ಜೊತೆಗೆ ಮಳೆ ನೀರು ನುಗ್ಗಿ ಹಾನಿ ಸಂಭವಿಸಿದೆ. ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿರುವ ರೈತ ವೀರೇಶ ಗಂಗನಗೌಡರ, ನಾಲತವಾಡದ ಜಗದೇವ ನಗರದ ಚರಂಡಿಯ ಕೊಳಚೆ ನೀರಿನಿಂದ ಸಮಸ್ಯೆ ಶುರುವಾಗಿದೆ. ಪಟ್ಟಣ ಪಂಚಾಯತ್ ಅಧಿಕಾರಿಗಳ ಬೇಜವಾಬ್ದಾರಿಯಿಂದ ಕೈಗೆ ಬಂದ ತುತ್ತು ಬಾಯಿಗೆ ಬರದಂತೆ ಆಗಿದೆ. ಮೊದಲೇ ಅತಿವೃಷ್ಟಿಯಿಂದ ತೋಟದಲ್ಲಿ ನೀರು ಸಂಗ್ರಹವಾಗಿ ಬಾಳೆ ಬೆಳೆಯುವ ಪ್ರಮಾಣ ಕಡಿಮೆಯಾಗಿತ್ತು. ಇದರ ಜೊತೆಗೆ ಜಗದೇವನಗರದ ಎಲ್ಲಾ ಚರಂಡಿ ನೀರು ಬರುವ ಕಾರಣ ಕೊಳಚೆ ನೀರಿನಿಂದ ಬಾಳೆ ಗಿಡಗಳು ನೆಲಕ್ಕೆ ಉರುಳುತ್ತಿವೆ. ಲಕ್ಷಾಂತರ ರೂಪಾಯಿ ಹಣ ಸಾಲ ಮಾಡಿ ಬಾಳೆ ಬೆಳೆದಿದ್ದೇವೆ. ಬಾಳೆ ಬೆಳೆಯ ನಷ್ಟವನ್ನು ಪಟ್ಟಣ ಪಂಚಾಯಿತಿಯಿಂದ ಭರಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.
ಇನ್ನು ಮುದ್ದೇಬಿಹಾಳ ರಸ್ತೆಯ ಎರಡು ಬದಿ ಚರಂಡಿ ನಿರ್ಮಾಣ ಮಾಡುವುದರ ಬದಲು ಎಡ ಭಾಗ ಮಾತ್ರ ಚರಂಡಿ ನಿರ್ಮಾಣ ಮಾಡಿರುವ ಕಾರಣ ರೈತನ ಜಮೀನಿನಲ್ಲಿ ಚರಂಡಿ ನೀರು ಸಂಗ್ರಹವಾಗುತ್ತಿದೆ. ಪಟ್ಟಣ ಪಂಚಾಯಿತಿ ಅಧಿಕಾರಿಗಳು ಎರಡು ಬದಿಯಲ್ಲಿ ಚರಂಡಿ ನಿರ್ಮಾಣ ಮಾಡಬೇಕು ಎಂದು ಸ್ಥಳೀಯ ನಿವಾಸಿಗಳು ಆಗ್ರಹಿಸಿದ್ದಾರೆ.