ವಿಜಯಪುರ: ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ ಹಿನ್ನೆಲೆಯಲ್ಲಿ ವಿಜಯಪುರ ನಗರ ಸೇರಿದಂತೆ ಜಿಲ್ಲಾದ್ಯಂತ ಸೋಮವಾರ ಸಂಜೆ ಭಾರಿ ಮಳೆ ಸುರಿದಿದೆ.
ನಿನ್ನೆ ಬೆಳಗ್ಗೆ ಸುಡು ಬಿಸಿಲಿನಿಂದ ಜನ ತತ್ತರಿಸಿ ಹೋಗಿದ್ದರು. ಸಂಜೆ ಏಕಾಏಕಿ ಮಳೆ ಆರಂಭಗೊಂಡು, ಸುಮಾರು ಮೂರು ಗಂಟೆಗಳ ಕಾಲ ಸತತ ಮಳೆ ಸುರಿಯಿತು. ರಸ್ತೆ ತುಂಬೆಲ್ಲಾ ನೀರು ನಿಂತು ವಾಹನ ಸವಾರರು ಹಾಗೂ ಪಾದಚಾರಿಗಳು ಪರದಾಡುವಂತಾಯಿತು.
ಮತ್ತೆ ರಾತ್ರಿ 8 ಗಂಟೆಗೆ ಆರಂಭಗೊಂಡ ಮಳೆಯಿಂದ ನಗರದಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಂಡಿತು. ಇದರಿಂದ ಜನ ಮತ್ತಷ್ಟು ತೊಂದರೆಗೆ ಸಿಲುಕಿಕೊಂಡರು.
ಹಲವು ಸ್ಲಂ ಕಾಲೋನಿಯಲ್ಲಿ ಮಳೆ ನೀರು ಮನೆಗಳಿಗೆ ನುಗ್ಗಿದ ಪರಿಣಾಮ ಮನೆ ಮಾಲೀಕರು ತೊಂದರೆ ಅನುಭವಿಸುವಂತಾಯಿತು. ಹವಾಮಾನ ಇಲಾಖೆ ಮಾಹಿತಿಯಂತೆ ಜಿಲ್ಲೆಯಲ್ಲಿ ಇಂದೂ ಮಳೆ ಬರುವ ಸಾಧ್ಯತೆಗಳಿವೆ.