ಮುದ್ದೇಬಿಹಾಳ: ಭಾರೀ ಮಳೆಯಿಂದ ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ಗೆದ್ದಲಮರಿ ಗ್ರಾಮದ ಕೆಲವು ಮನೆಗಳಿಗೆ ನೀರು ನುಗ್ಗಿದ ಪರಿಣಾಮ ಜನರು ತೀವ್ರ ತೊಂದರೆ ಅನುಭವಿಸುವಂತಾಗಿದೆ. ಮನೆಯಲ್ಲಿನ ಬಟ್ಟೆ, ಪಾತ್ರೆ, ದಿನಸಿ ವಸ್ತುಗಳು ನೀರುಪಾಲಾಗಿವೆ.
ರಾಜು ಕಿರಪ್ಪ ಲಮಾಣಿ, ಮಾಳಪ್ಪ ಕನ್ನೂರ, ಬದ್ದು ಲಮಾಣಿ ಎಂಬುವರ ಮನೆಗಳು ಜಲಾವೃತಗೊಂಡಿವೆ. ಗ್ರಾಮದ ರಸ್ತೆಯ ಪಕ್ಕದಲ್ಲಿರುವ ಚರಂಡಿ ಕಟ್ಟಿಕೊಂಡಿದ್ದು, ನೀರು ಮುಂದಕ್ಕೆ ಹೋಗದೆ ಅವಾಂತರ ಸೃಷ್ಟಿಯಾಗಿದೆ ಎಂದು ಗ್ರಾಮಸ್ಥರು ಕಿಡಿಕಾರಿದ್ದಾರೆ.
ಗ್ರಾ.ಪಂ. ವಿರುದ್ಧ ಆಕ್ರೋಶ:
ಗೆದ್ದಲಮರಿ ಗ್ರಾಮದಲ್ಲಿ ಮಳೆ ನೀರು ಮನೆಗಳಿಗೆ ನುಗ್ಗಲು ಅವೈಜ್ಞಾನಿಕವಾಗಿ ನಿರ್ಮಿಸಿರುವ ಚರಂಡಿಯೇ ಕಾರಣ ಎಂದು ಗ್ರಾಮಸ್ಥರು ದೂರಿದ್ದಾರೆ.
ಈ ಕುರಿತು ಮಾತನಾಡಿರುವ ಗ್ರಾಮದ ಮಹಿಳೆಯೊಬ್ಬರು, ಚರಂಡಿ ಕೆಲಸ ಬೇಕಾಬಿಟ್ಟಿಯಾಗಿ ಮಾಡುವಾಗಲೇ ನಾವು ವಿರೋಧಿಸಿದ್ದೆವು. ಅದಕ್ಕೆ ಬೆಲೆ ಕೊಡದೇ ಕೆಲಸ ಮಾಡಿದ್ದಾರೆ. ಚರಂಡಿ ತ್ಯಾಜ್ಯ ಮನೆ ಒಳಗೆ ನುಗ್ಗಿದೆ ಎಂದು ಅಳಲು ತೋಡಿಕೊಂಡರು.