ವಿಜಯಪುರ: ಕಳೆದ ರಾತ್ರಿ ಜಿಲ್ಲೆಯಾದ್ಯಂತ ಸುರಿದ ಭಾರೀ ಮಳೆಗೆ ಮುಳುಗಡೆ ಭೀತಿ ಎದುರಿಸುತ್ತಿದ್ದ ತಾರಾಪುರ ಗ್ರಾಮದಲ್ಲಿ 10ಕ್ಕೂ ಅಧಿಕ ಮನೆಗಳು ಕುಸಿದು ಬಿದ್ದಿವೆ.
ಸ್ಥಳಾಂತರವಾಗಬೇಕಿದ್ದ ತಾರಾಪುರ ಗ್ರಾಮದಲ್ಲಿ ಈಗ ಭಯದ ವಾತಾವರಣ ನಿರ್ಮಾಣವಾಗಿದೆ. ರಾತ್ರಿ ಸುಮಾರು 3 ಗಂಟೆಗಳ ಕಾಲ ಮಳೆ ಸುರಿದಿದ್ದು, ಗ್ರಾಮಸ್ಥರು ಮನೆಯಿಂದ ಹೊರ ಬಂದು ರಾತ್ರಿ ಕಳೆದಿದ್ದಾರೆ. ಮಹಾರಾಷ್ಟ್ರ ಹಾಗೂ ಭೀಮಾ ನದಿ ತೀರದ ಭಾಗದಲ್ಲಿ ಹೆಚ್ಚು ಮಳೆಯಾದರೆ ಕಲಬುರಗಿ ಜಿಲ್ಲೆಯ ಸೊನ್ನ ಬ್ಯಾರೇಜ್ಗೆ ನೀರು ಹರಿದು ಬರುವ ಕಾರಣ ಹಿನ್ನೀರಿನಲ್ಲಿ ಸಿಲುಕಿ ತಾರಾಪುರ ಪ್ರತೀ ಬಾರಿ ಮುಳುಗಡೆ ಭೀತಿ ಎದುರಿಸುತ್ತಲೇ ಇದೆ.
ಪ್ರತೀ ವರ್ಷ ಭೀಮಾ ನದಿಗೆ ಪ್ರವಾಹ ಉಂಟಾದಲ್ಲಿ ತಾರಾಪೂರ ಗ್ರಾಮವನ್ನು ಹಿನ್ನೀರು ಸುತ್ತುವರೆಯುವುದು ಮಾಮೂಲಿಯಾಗಿದೆ. ಆದರೆ ಗ್ರಾಮ ಮಾತ್ರ ಕಳೆದ 16 ವರ್ಷಗಳಿಂದ ಸ್ಥಳಾಂತರವಾಗದೆ ಗ್ರಾಮಸ್ಥರು ಪ್ರತೀ ವರ್ಷ ನರಕ ಯಾತನೆ ಅನುಭವಿಸುತ್ತಿದ್ದಾರೆ. ಸ್ಥಳಕ್ಕೆ ಬಾರದ ಅಧಿಕಾರಿಗಳ ವಿರುದ್ಧ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಜಿಲ್ಲಾದ್ಯಂತ ಉತ್ತಮ ಮಳೆ:
ಕಳೆದ ರಾತ್ರಿ ಜಿಲ್ಲೆಯಲ್ಲಿ ನಿರಂತರ ಮಳೆಯಾಗಿದೆ. ವಿಜಯಪುರ ನಗರ, ಮುದ್ದೇಬಿಹಾಳ, ತಾಳಿಕೋಟೆ, ಸಿಂದಗಿ, ಬಸವನಬಾಗೇವಾಡಿ, ಬಬಲೇಶ್ವರ ಸೇರಿದಂತೆ ಎಲ್ಲಾ ತಾಲೂಕು ಕೇಂದ್ರಗಳಲ್ಲಿ ಮಳೆ ಸುರಿದಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ.