ವಿಜಯಪುರ : ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣದಲ್ಲಿ ಕೆ ಎಸ್ ಈಶ್ವರಪ್ಪ ರಾಜೀನಾಮೆ ನೀಡಿದ್ದಾರೆ. ಇದೀಗ ಕಾಂಗ್ರೆಸ್ ಮುಖಂಡರು ಅವರನ್ನು ಬಂಧನಕ್ಕೆ ಒಳಪಡಿಸಬೇಕೆಂದು ಆಗ್ರಹಿಸುತ್ತಿದ್ದಾರೆ. ಅವರನ್ನು ಬಂಧಿಸಿ ಏನು ಮಾಡುತ್ತಾರೆ ಎಂದು ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಪ್ರಶ್ನಿಸಿದರು. ಆಲಮಟ್ಟಿಯ ಕೃಷ್ಣಾ ನದಿಯಲ್ಲಿ ಜನತಾ ಜಲಧಾರೆ ಕಾರ್ಯಕ್ರಮ ಹಿನ್ನೆಲೆಯಲ್ಲಿ ನೀರು ಸಂಗ್ರಹಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.
ರಾಜ್ಯದಲ್ಲಿ ಧರ್ಮ-ಧರ್ಮಗಳ ಯುದ್ಧ ನಡೆಯುತ್ತಿದ್ದಾಗ ಕಾಂಗ್ರೆಸ್ ಮುಖಂಡರು ಏನು ಮಾಡುತ್ತಿದ್ದರು? ಮನೆಯಲ್ಲಿ ಕುಳಿತಿದ್ದರು. ಈಗ ಈಶ್ವರಪ್ಪ ಅವರ ಪರ್ಸೆಂಟೇಜ್ ವಿಚಾರವಾಗಿವ ಕಾಂಗ್ರೆಸ್ ಮುಖಂಡರು ಬೀದಿಗೆ ಇಳಿದಿದ್ದಾರೆ. ಅಂದು ಏಕೆ ಬೀದಿಗೆ ಇಳಿಯಲಿಲ್ಲ ಎಂದು ಪ್ರಶ್ನಿಸಿದ ಹೆಚ್‌ಡಿಕೆ, ಅವರು ರಾಜ್ಯದಲ್ಲಿ ಅಶಾಂತಿ ಸೃಷ್ಟಿ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಸಂತೋಷ್ ಪಾಟೀಲ್ ಆತ್ಮಹತ್ಯೆ ವಿಚಾರವಾಗಿ ಈಶ್ವರಪ್ಪ ಮೇಲೆ ಕಾಂಗ್ರೆಸ್ ಮುಖಂಡರು ಆರೋಪಿಸುತ್ತಿದ್ದಾರೆ. ಈ ಹಿಂದೆ ಸಿದ್ದರಾಮಯ್ಯ ಸಿಎಂ ಆಗಿದ್ದ ವೇಳೆ ಬೆಳಗಾವಿಯ ನಿಷ್ಠಾವಂತ ಡಿವೈಎಸ್ಪಿ ಕಲ್ಲಪ್ಪ ಹಂಡಿಭಾಗ್ ಆತ್ಮಹತ್ಯೆ ಮಾಡಿಕೊಂಡಾಗ ಸಿದ್ದರಾಮಯ್ಯ ರಾಜೀನಾಮೆ ನೀಡಿದ್ರಾ? ಗೃಹ ಸಚಿವರ ಬಂಧನ ಮಾಡಿದ್ರಾ? ಎಂದು ಪ್ರಶ್ನಿಸಿದರು.
ಅಂದು ಸರ್ಕಾರದ ನಡುವಳಿಕೆಗೆ ಬೇಸತ್ತು ಕಲ್ಲಪ್ಪ ಹಂಡಿಭಾಗ್ ಆತ್ಮಹತ್ಯೆ ಮಾಡಿಕೊಂಡಿದ್ದರು ಎಂದರು. ಇನ್ನೂ ಕಾಂಗ್ರೆಸ್ ಮುಖಂಡರಿಗೆ ಮುಂದಿನ ಚುನಾವಣೆಯ ಸಲುವಾಗಿ ಮಾತನಾಡಲು ವಿಷಯವೇ ಇಲ್ಲ. ಹೀಗಾಗಿ, ಆತ್ಮಹತ್ಯೆ ಪ್ರಕರಣವನ್ನು ದೊಡ್ಡದು ಮಾಡುತ್ತಿದ್ದಾರೆ ಎಂದರು.
ಇದನ್ನೂ ಓದಿ: ಜಿಲ್ಲಾಧಿಕಾರಿ ನಡೆ ಹಳ್ಳಿಕಡೆ.. ಗ್ರಾಮ ವಾಸ್ತವ್ಯದಲ್ಲಿ ಪಾಲ್ಗೊಳ್ಳಲು ಬಂದ ಡಿಸಿಗೆ ಅದ್ದೂರಿ ಸ್ವಾಗತ..
ಈ ಆತ್ಮಹತ್ಯೆ ಪ್ರಕರಣದ ಹಿಂದೆ ಮಹಾನಾಯಕರೊಬ್ಬರ ಕೈವಾಡವಿದೆ ಎನ್ನುವ ಪ್ರಶ್ನೆಗೆ ಪ್ರತಿಕ್ರಿಯಿಸಿ, ಮಹಾನಾಯಕರೋ, ದುರಂತ ನಾಯಕರೋ, ಯಾವ ಕಳ್ಳ ನಾಯಕರೋ ನನಗೆ ಗೊತ್ತಿಲ್ಲ. ಸರ್ಕಾರ ಪ್ರಕರಣದ ವಾಸ್ತವಾಂಶವನ್ನು ಜನರ ಮುಂದಿಡಬೇಕು ಎಂದು ಒತ್ತಾಯಿಸಿದರು.
ಸಾಲ ಮನ್ನಾ ಮಾಡಿದ್ದೇ ನಾನು : 2018ರ ಚುನಾವಣೆ ವೇಳೆ ರಾಜ್ಯದ ರೈತರ ಸಾಲ ಮನ್ನಾ ಮಾಡುವುದಾಗಿ ನಾನು ಭರವಸೆ ನೀಡಿದ್ದೆ. ಆಗ ಇದೇ ನಾಯಕರು ಎಲ್ಲಿಂದ ಹಣ ತರುತ್ತಾರೆ ಎಂದು ವ್ಯಂಗವಾಡಿದ್ದರು. ಆದರೆ, ನಂತರ ಸಾಲ ಮನ್ನಾ ಮಾಡಿ ತೋರಿಸಿದ್ದೇನೆ ಎಂದರು.
ಟ್ಯ್ರಾಕ್ಟರ್ ರ್ಯಾಲಿ : ಕಾಂಗ್ರೆಸ್ ಮುಖಂಡ ಎಸ್. ಆರ್. ಪಾಟೀಲ್ ಮಹಾದಾಯಿ, ಕೃಷ್ಣಾ ಮೇಲ್ದಂಡೆ 3ನೇ ಹಂತದ ಯೋಜನೆ, ನವಲೆ ಯೋಜನೆ ಬಗ್ಗೆ ರ್ಯಾಲಿ ನಡೆಸುತ್ತಿದ್ದಾರೆ. ರಾಜ್ಯ ರಾಷ್ಟ್ರೀಯ ಪಕ್ಷಗಳ ನಿರ್ಲಕ್ಷ್ಯದಿಂದ ಯಾವ ನೀರಾವರಿ ಯೋಜನೆ ಸಮರ್ಪಕವಾಗಿ ಬಳಸಿಕೊಂಡಿಲ್ಲ ಎಂದು ಹೆಚ್‌ಡಿಕೆ ಆರೋಪಿಸಿದರು.