ಮುದ್ದೇಬಿಹಾಳ: ಪಟ್ಟಣದಲ್ಲಿ ಕೊರೊನಾ ವೈರಸ್ ನಿಯಂತ್ರಣಕ್ಕಾಗಿ ಕೈಗೊಂಡಿರುವ ಸ್ವಯಂ ಲಾಕ್‌ಡೌನ್ ನಿರ್ಣಯದಲ್ಲಿ ಅಲ್ಪ ಮಾರ್ಪಾಡು ಮಾಡಲಾಗಿದೆ. ಆಗಸ್ಟ್ 1 ರವರೆಗೆ ಅರ್ಧ ದಿನದ ಲಾಕ್‌ಡೌನ್ ವಿಸ್ತರಣೆ ಮಾಡಲಾಗುವುದು ಎಂದು ಮುಖಂಡ ಶರಣು ಬೂದಿಹಾಳಮಠ ತಿಳಿಸಿದರು.
ಪಟ್ಟಣದ ಕರ್ನಾಟಕ ಅರ್ಬನ್ ಬ್ಯಾಂಕ್‌ನಲ್ಲಿ ಸೋಮವಾರ ಸಂಜೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಕ್ರೀದ್ ಹಬ್ಬ ಹಾಗೂ ಶ್ರಾವಣ ಮಾಸದ ತಿಂಗಳಾಗಿರುವುದರಿಂದ ಖರೀದಿ ಪ್ರಕ್ರಿಯೆಗೆ ಹಿನ್ನಡೆಯಾಗಬಾರದು ಎಂಬ ಉದ್ದೇಶದಿಂದ ಅರ್ಧ ದಿನದ ಲಾಕ್‌ಡೌನ್ ಅನ್ನು ವಿಸ್ತರಣೆ ಮಾಡಲು ಹಲವು ವ್ಯಾಪಾರಿ ಸಂಘ ಸಂಸ್ಥೆಯವರು ಒತ್ತಾಯ ಮಾಡಿದ್ದರು. ನಂತರ ಆಗಸ್ಟ್ 1 ರಿಂದ 9ರವರೆಗೆ ಪೂರ್ಣ ಲಾಕ್‌ಡೌನ್ ಮಾಡಲಾಗುತ್ತದೆ ಎಂದು ಹೇಳಿದರು.
ಬಿಜೆಪಿ ಮುಖಂಡ ವಿಕ್ರಂ ಓಸ್ವಾಲ್ ಮಾತನಾಡಿ, ಸ್ವಯಂ ಲಾಕ್‌ಡೌನ್‌ಗೆ ಇಂದು ವ್ಯಾಪಾರಸ್ಥರು ಸಹಕಾರ ಮಾಡಿದ್ದಾರೆ. ಮಧ್ಯಾಹ್ನ 3 ಗಂಟೆಯ ಅವಧಿಯಲ್ಲಿ ಎಲ್ಲರೂ ತಮ್ಮ ವ್ಯಾಪಾರ ವಹಿವಾಟು ಸ್ಥಗಿತಗೊಳಿಸಿದ್ದಾರೆ. ಕೆಲವರಿಗೆ ನಾವೇ ಹೋಗಿ ಮನವಿ ಮಾಡಿ ಅಂಗಡಿಗಳನ್ನು ಬಂದ್ ಮಾಡಿ ಕೊರೊನಾ ನಿರ್ಮೂಲನೆಗೆ ಕೈ ಜೋಡಿಸುವಂತೆ ಮನವಿ ಮಾಡಿದ್ದೇವೆ. ಅದಕ್ಕೆ ಅವರು ಸ್ಪಂದಿಸಿದ್ದಾರೆ ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಕೆಯುಸಿ ಬ್ಯಾಂಕ್ ನಿರ್ದೇಶಕ ಪ್ರಭುರಾಜ ಕಲ್ಬುರ್ಗಿ, ವರ್ತಕ ಸಂಗನಗೌಡ ಬಿರಾದಾರ, ಉದ್ಯಮಿ ಶರಣು ಸಜ್ಜನ, ನಿಂಗಣ್ಣ ಚಟ್ಟೇರ, ಸುಧೀರ ನಾವದಗಿ ಇದ್ದರು.