ವಿಜಯಪುರ : ನಗರ ಪ್ರದೇಶದಲ್ಲಿ ಮಾತ್ರ ಪಾಸಿಟಿವ್ ಪ್ರಕರಣಗಳು ಕಂಡು ಬಂದಿವೆ. ಹಾಗಾಗಿ ವಿಜಯಪುರ ಜಿಲ್ಲೆಯ ವಿಷಯವನ್ನು ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಲಾಗಿದೆ. ವಿಡಿಯೋ ಸಂದರ್ಶನದ ಮೂಲಕ ಜಿಲ್ಲೆಯ ಎಲ್ಲಾ ಜನಪ್ರತಿನಿಧಿಗಳ ಅಭಿಪ್ರಾಯವನ್ನು ಈಗಾಗಲೇ ಮುಖ್ಯಮಂತ್ರಿಗಳು ಸಂಗ್ರಹಿಸಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವೆ ಶಶಿಕಲಾ ಜೊಲ್ಲೆ ತಿಳಿಸಿದರು.
ಮುಖ್ಯಮಂತ್ರಿಗಳ ಜೊತೆ ಚರ್ಚಿಸಿ ಹಾಗೂ ಅಭಿಪ್ರಾಯ ಸಂಗ್ರಹಿಸಿ ಮೇ.4ರಿಂದ ವಿಜಯಪುರ ನಗರ ಹೊರತುಪಡಿಸಿ ಉಳಿದ ಕಡೆಗಳಲ್ಲಿ ವಿವಿಧ ಚಟುವಟಿಕೆ ಆರಂಭಿಸಲು ಗ್ರೀನ್ ಸಿಗ್ನಲ್ ಪಡೆದುಕೊಳ್ಳಲಾಗಿದೆ ಎಂದರು.
ವಿಜಯಪುರದ ನಿರ್ದಿಷ್ಟ ಸ್ಥಳದಲ್ಲಿಯೇ ಹೆಚ್ಚಿನ ಸಂಖ್ಯೆಯ ಕೊರೊನಾ ಫಾಸಿಟಿವ್ ಪ್ರಕರಣ ಕಂಡು ಬಂದ ಹಿನ್ನೆಲೆಯಲ್ಲಿ ಈಗಾಗಲೇ ಆ ಪ್ರದೇಶವನ್ನು ನಿರ್ಬಂಧಿತ ಪ್ರದೇಶ ಎಂದು ಗುರುತಿಸಿ ಅಲ್ಲಿಂದ ಯಾರೂ ಹೊರಬರದಂತೆ, ಹೊರಗಿನಿಂದ ಒಳಗೆ ಹೋಗದಂತೆ ಪೊಲೀಸ್ ಭದ್ರಕೋಟೆ ಹಾಕಲಾಗಿದೆ ಎಂದರು.
ಸಂವಾದದ ವೇಳೆ ಜಿಲ್ಲಾಧಿಕಾರಿ ವೈ ಎಸ್ ಪಾಟೀಲ, ಎಸ್ ಪಿ ಅನುಪಮ ಅಗರ್ವಾಲ್ ಮೊದಲಾದವರು ಉಪಸ್ಥಿತರಿದ್ದರು.