ಮುದ್ದೇಬಿಹಾಳ (ವಿಜಯಪುರ): ಜೀವ ಪಣಕ್ಕಿಟ್ಟು ಕೊರೊನಾ ವೈರಸ್ ವಿರುದ್ಧ ಹೋರಾಡುತ್ತಿರುವ ಕೊರೊನಾ ವಾರಿಯರ್ಸ್ಗಳ ಸೇವೆಯನ್ನು ಸ್ಮರಿಸಲು ವಿವಿಧ ಸಂಘಟನೆಗಳ ಸದಸ್ಯರು ರಕ್ತದಾನ ಮಾಡಿದರು. ವಿಕಲಚೇತನರಾದ ವಿರೂಪಾಕ್ಷ ಗುರಿಕಾರ, ಮಲ್ಲಿಕಾರ್ಜುನ ಡೋಣಿ ಅವರೂ ರಕ್ತದಾನ ಮಾಡಿ ಪ್ರಶಂಸೆಗೆ ಪಾತ್ರರಾದರು.
ತಾಲೂಕಿನ ಯರಝರಿಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮತ್ತು ಸಮುದಾಯ ಆರೋಗ್ಯ ಕೇಂದ್ರದ ಕಾಳಗಿ, ಕರ್ನಾಟಕ ರಾಜ್ಯ ಯುವ ಸಂಘಗಳ ಒಕ್ಕೂಟದ ತಾಲೂಕು ಘಟಕ, ಯರಝರಿ ಗ್ರಾಮದ ಭಗತ್ ಸಿಂಗ್ ಯುವಕ ಸಂಘ ಹಾಗೂ ಪ್ರಗತಿಪರ ಸಂಘಟನೆಗಳ ಸಂಯುಕ್ತ ಆಶ್ರಯದಲ್ಲಿ ಈ ಶಿಬಿರ ಆಯೋಜಿಸಲಾಗಿತ್ತು.
ಕಾಳಗಿ ಸಮುದಾಯ ಆರೋಗ್ಯ ಕೇಂದ್ರದ ವೈದ್ಯ ಡಾ.ರಂಗನಾಥ ವೈದ್ಯ ಅವರು ಕಾರ್ಯಕ್ರಮ ಉದ್ಘಾಟಿಸಿದರು. ಒಂದು ಯೂನಿಟ್ ರಕ್ತದಿಂದ ಕನಿಷ್ಠ ಮೂವರ ಜೀವ ಉಳಿಸಬಹುದು. ಕೊರೊನಾ ವೈರಸ್ನ ಸಂದಿಗ್ಧ ಪರಿಸ್ಥಿತಿಯಲ್ಲಿ ಯುವಕರು ರಕ್ತದಾನದಂತಹ ಶಿಬಿರಕ್ಕೆ ಸಾಕ್ಷಿಯಾಗಿರುವುದು ಶ್ಲಾಘನೀಯ ಎಂದರು.
ಕರ್ನಾಟಕ ರಾಜ್ಯ ಯುವ ಸಂಘಗಳ ಒಕ್ಕೂಟದ ಅಧ್ಯಕ್ಷ ಹುಸೇನ್ ಮುಲ್ಲಾ ಮಾತನಾಡಿ, ಯುವಕರು ರಕ್ತದಾನ ಮಾಡುವ ಮೂಲಕ ಒಗ್ಗೂಡಿ ಗ್ರಾಮೀಣ ಪ್ರದೇಶದಿಂದಲೂ ಒಳ್ಳೆಯ ಸಂದೇಶ ರವಾನಿಸುತ್ತಿದ್ದಾರೆ. ಶಿಬಿರದಲ್ಲಿ 45 ಯೂನಿಟ್ ರಕ್ತದಾನ ಮಾಡಲಾಗಿದೆ ಎಂದು ಹೇಳಿದರು.