ಮುದ್ದೇಬಿಹಾಳ (ವಿಜಯಪುರ): ಗ್ರಾಮ ಪಂಚಾಯತ್ ಉಪಾಧ್ಯಕ್ಷರೊಬ್ಬರು ಮುದ್ದೇಬಿಹಾಳ ಪ್ರವಾಸದಲ್ಲಿದ್ದ ಸಚಿವೆ ಶಶಿಕಲಾ ಜೊಲ್ಲೆ ಅವರ ಕಾರಿಗೆ ಘೇರಾವ್ ಹಾಕಲು ಯತ್ನಿಸಿದ ಘಟನೆ ಪಟ್ಟಣದಲ್ಲಿ ಶುಕ್ರವಾರ ನಡೆದಿದೆ.
ಮುದ್ದೇಬಿಹಾಳ ತಹಶೀಲ್ದಾರ್ ಕಚೇರಿಯಲ್ಲಿ ಅಧಿಕಾರಿಗಳ ಸಭೆ ಹಾಗೂ ಪತ್ರಿಕಾಗೋಷ್ಠಿ ಮುಗಿಸಿ ತಾಳಿಕೋಟಿಗೆ ಹೊರಟಿದ್ದ ವೇಳೆ ಈ ಘಟನೆ ನಡೆದಿದೆ.
ತಾಲೂಕಿನ ರೂಢಗಿ ಗ್ರಾಪಂ ಉಪಾಧ್ಯಕ್ಷ ಬಸವರಾಜ ಬೆಲ್ಲದ್, ಸಚಿವರ ಕಾರಿಗೆ ಮುದ್ದೇಬಹಾಳ ಪಟ್ಟಣದ ಎಪಿಎಂಸಿ ಪಕ್ಕದ ಮಾರುತಿ ನಗರಕ್ಕೆ ಹೋಗುವ ರಸ್ತೆಯ ಬಳಿ ಘೇರಾವ್ ಹಾಕಲು ಯತ್ನಿಸಿದ್ದಾರೆ.
ಆಗಿದ್ದೇನು? : ರೂಢಗಿ ಗ್ರಾಪಂ ವ್ಯಾಪ್ತಿಯ ರೂಢಗಿ ತಾಂಡಾದಲ್ಲಿ ಸಾರಿಗೆ ನೌಕರ ಗಿರೀಶ್ ರಾಮಪ್ಪ ಪವಾರ ಎಂಬುವರು ಮೃತಪಟ್ಟಿದ್ದಾರೆ. ಅವರಿಗೆ ಕೋವಿಡ್ ಇರಬಹುದು ಎಂಬ ಶಂಕೆಯಿಂದ ತಾಂಡಾದ ನಿವಾಸಿಗಳ್ಯಾರೂ ಅವರ ಮನೆಯ ಹತ್ತಿರ ಸುಳಿದಿಲ್ಲ. ಅಲ್ಲದೇ ಅಂತ್ಯಕ್ರಿಯೆ ಮಾಡಲು ಮುಂದೆ ಬರಲಿಲ್ಲ ಎನ್ನಲಾಗಿದೆ.
ಇದರಿಂದ ಮನನೊಂದ ಪವಾರ ಕುಟುಂಬದವರು ಗ್ರಾಪಂ ಉಪಾಧ್ಯಕ್ಷರಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಇದರಿಂದ ರೋಸಿ ಹೋದ ಉಪಾಧ್ಯಕ್ಷ ಬೆಲ್ಲದ್, ಸಚಿವರು ಮುದ್ದೇಬಿಹಾಳದ ಪ್ರವಾಸದಲ್ಲಿರುವುದನ್ನು ತಿಳಿದು ಪಟ್ಟಣದ ರಿಲಯನ್ಸ್ ಪೆಟ್ರೋಲ್ ಪಂಪ್ ಪಕ್ಕದಲ್ಲಿ ಕಾಯ್ದು ನಿಂತಿದ್ದಾರೆ.
ಸಚಿವರ ಕಾರು ರಿಲಯನ್ಸ್ ಪೆಟ್ರೊಲ್ ಬಂಕ್ ಬಳಿ ಬರುತ್ತಲೇ ಬೈಕ್ ತೆಗೆದುಕೊಂಡು ಏಕಾಏಕಿ ಸಚಿವರ ಕಾರು ಅಡ್ಡಗಟ್ಟಿದರು ಎನ್ನಲಾಗಿದೆ. ಏಕಾಏಕಿ ಬೈಕ್ ಅಡ್ಡ ಬಂದಿದ್ದರಿಂದ ಸಚಿವರು ತಮ್ಮ ಚಾಲಕನಿಗೆ ತಿಳಿಸಿ ಕಾರು ನಿಲ್ಲಿಸಿದ್ದಾರೆ.
ಈ ವೇಳೆ ಗ್ರಾಪಂ ಉಪಾಧ್ಯಕ್ಷ ಬೆಲ್ಲದ್, ತಮ್ಮ ಪಂಚಾಯತ್ ವ್ಯಾಪ್ತಿಯಲ್ಲಿ ಆಗಿರುವ ಘಟನೆಯನ್ನು ಸಚಿವರ ಎದುರಿಗೆ ವಿವರಿಸಲು ಮುಂದಾಗಿದ್ದಾರೆ.
ಅಷ್ಟರಲ್ಲಾಗಲೇ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಡಾ.ರಾಮ್ ಅರಸಿದ್ದಿ, ಸಿಪಿಐ ಆನಂದ ವಾಘಮೋಡೆ ಅವರು ತಕ್ಷಣ ಅವರನ್ನು ರಸ್ತೆಯಿಂದ ಪಕ್ಕಕ್ಕೆ ಸರಿಯುವಂತೆ ವಾರ್ನಿಂಗ್ ಮಾಡಿ ಸಚಿವರ ಕಾರು ಮುಂದೆ ತೆರಳುವುದಕ್ಕೆ ಅನುಕೂಲ ಮಾಡಿಕೊಟ್ಟಿದ್ದಾರೆ. ಈ ಘಟನೆಯನ್ನು ಸ್ಥಳದಲ್ಲಿದ್ದ ವ್ಯಕ್ತಿಯೊಬ್ಬರು ಮೊಬೈಲ್‌ನಲ್ಲಿ ಸೆರೆ ಹಿಡಿದಿದ್ದಾರೆ.
ಮೃತಪಟ್ಟ ವ್ಯಕ್ತಿಯ ದೇಹದಿಂದ ಸ್ವಾಬ್ ಸಂಗ್ರಹ : ಗ್ರಾಪಂ ಉಪಾಧ್ಯಕ್ಷ ಬಸವರಾಜ ಬೆಲ್ಲದ್‌ನನ್ನು ಪೊಲೀಸ್ ಠಾಣೆಗೆ ಕರೆಯಿಸಿಕೊಂಡ ಪಿಎಸ್ಐ ಎಂ ಬಿ ಬಿರಾದಾರ್ ಅವರು ಸಂಬಂಧಿಸಿದ ಢವಳಗಿ ಆರೋಗ್ಯ ಕೇಂದ್ರದ ಬಸವರಾಜ ಆಲಗೂರ ಅವರೊಂದಿಗೆ ಮಾತನಾಡಿ ಸತ್ತ ವ್ಯಕ್ತಿಯ ಸ್ವ್ಯಾಬ್ ಸಂಗ್ರಹಿಸಲು ಕೋರಿದ್ದಾರೆ.
ಬಳಿಕ ಆರೋಗ್ಯ, ಆಶಾ, ಅಂಗನವಾಡಿ ಕಾರ್ಯಕರ್ತರು ಹಾಗೂ ಪೊಲೀಸ್ ಸಮ್ಮುಖದಲ್ಲಿ ಮೃತಪಟ್ಟಿದ್ದ ಸಾರಿಗೆ ನೌಕರ ಗಿರೀಶ್ ಪವಾರನ ಗಂಟಲು ದ್ರವದ ಮಾದರಿ ಸಂಗ್ರಹಿಸಿ ಬಳಿಕ ಅಂತ್ಯಕ್ರಿಯೆ ಮಾಡಲಾಗಿದೆ ಎಂದು ರೂಢಗಿ ಪಿಡಿಒ ಎನ್.ಎಮ್.ಬಿಸ್ಟಗೊಂಡ ಮಾಹಿತಿ ನೀಡಿದ್ದಾರೆ.