ಮುದ್ದೇಬಿಹಾಳ: ತಾಲೂಕಿನ ಆಲೂರ ಗ್ರಾಮ ಪಂಚಾಯಿತಿ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಗಳ ಆಯ್ಕೆಗೆ ಚುನಾವಣೆ ಗುರುವಾರದಂದು ನಡೆದಿದೆ. ಈ ವೇಳೆ ಅಧ್ಯಕ್ಷ ಸ್ಥಾನವನ್ನು ಲಾಟರಿ ಪ್ರಕ್ರಿಯೆ ನಡೆಸುವ ಮೂಲಕ ಆಯ್ಕೆ ಮಾಡಲಾಯಿತು.
ಸಾಮಾನ್ಯ ವರ್ಗಕ್ಕೆ ಮೀಸಲಿದ್ದ ಅಧ್ಯಕ್ಷ ಸ್ಥಾನಕ್ಕೆ ವಿಜಯಲಕ್ಷಮ್ಮ ಪಂಪಣ್ಣವರ ಹಾಗೂ ಚನ್ನಬಸವರಾಜ ನಾಡಗೌಡ ನಾಮಪತ್ರ ಸಲ್ಲಿಸಿದ್ದರು. ಉಪಾಧ್ಯಕ್ಷ ಸ್ಥಾನಕ್ಕೆ ಶೋಭಾ ಶೆಳ್ಳಗಿ ಹಾಗೂ ಸಂಗಮ್ಮ ಕಲಬುರಗಿ ನಾಮಪತ್ರ ಸಲ್ಲಿಸಿದ್ದರು. ಒಟ್ಟು 21 ಸದಸ್ಯ ಬಲದ ಪಂಚಾಯಿತಿಯಲ್ಲಿ ಎರಡೂ ಸ್ಥಾನಕ್ಕೆ ಮತದಾನ ನಡೆಸಲಾಯಿತು. ಈ ವೇಳೆ 21 ರಲ್ಲಿ ಒಂದು ಮತ ತಿರಸ್ಕೃತಗೊಂಡ ಕಾರಣ ಅಧ್ಯಕ್ಷ ಸ್ಥಾನಕ್ಕೆ ಇಬ್ಬರೂ ಅಭ್ಯರ್ಥಿಗಳು ತಲಾ ಹತ್ತು ಮತಗಳನ್ನು ಪಡೆದುಕೊಂಡು ಫಲಿತಾಂಶ ಸಮವಾಯಿತು.
ಇದನ್ನು ಓದಿ: ಫೆಬ್ರವರಿ 6 ರಂದು ಮೂರು ಗಂಟೆಗಳ ಕಾಲ 'ಚಕ್ಕಾ ಜಾಮ್': ಟಿಕಾಯತ್ ಘೋಷಣೆ
ಈ ವೇಳೆ ಎಲ್ಲ ಸದಸ್ಯರ ಒಪ್ಪಿಗೆ ಪಡೆದು ಲಾಟರಿ ಪ್ರಕ್ರಿಯೆ ನಡೆಸಿದ ಚುನಾವಣಾಧಿಕಾರಿ, ಕೆಬಿಜೆಎನ್‌ಎಲ್ ಅಧಿಕಾರಿ ವಿ.ಎಸ್.ಬಡಿಗೇರ ಅವರು ಸಭೆಗೆ ಸದಸ್ಯರೊಬ್ಬರೊಂದಿಗೆ ಆಗಮಿಸಿದ್ದ ಎಂಟು ವರ್ಷದ ಬಾಲಕಿ ತನುಶ್ರೀ ವಡ್ಡರ ಕೈಯಿಂದ ಚೀಟಿ ತೆಗೆಸಿದರು. ಈ ಅದೃಷ್ಟದಾಟದಲ್ಲಿ ಅಧ್ಯಕ್ಷರಾಗಿ ಚನ್ನಬಸವರಾಜ ನಾಡಗೌಡ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿಗಳು ಘೋಷಿಸಿದರು.
ಉಪಾಧ್ಯಕ್ಷ ಸ್ಥಾನಕ್ಕೆ ಶೋಭಾ ಶೆಳ್ಳಗಿ 11 ಮತಗಳನ್ನು ಪಡೆದರೆ ಅವರ ಪ್ರತಿಸ್ಪರ್ಧಿ ಸಂಗಮ್ಮ ಕಲಬುರಗಿ ೧೦ ಮತಗಳನ್ನು ಪಡೆದುಕೊಂಡು ಪರಾಭವಗೊಂಡರು. ಸಹಾಯಕರಾಗಿ ಪಿಡಿಓ ಅಯ್ಯಪ್ಪ ಮಲಗಲದಿನ್ನಿ, ಎಸ್‌ಡಿಎ ನಿಂಗನಗೌಡ ಬಿರಾದಾರ, ರಾಜು ಕುಂಬಾರ ಭಾಗಿಯಾಗಿದ್ದರು. ಪಿಎಸ್ವೈ ಮಲ್ಲಪ್ಪ ಮಡ್ಡಿ ಭದ್ರತೆ ವಹಿಸಿದ್ದರು. ಅಂತಿಮ ಕ್ಷಣದವರೆಗೂ ಕುತೂಹಲ ಕೆರಳಿಸಿದ್ದ ಆಲೂರ ಗ್ರಾಪಂ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳಿಗೆ ಅದೃಷ್ಟ ಕೈಕೊಟ್ಟಿತ್ತು.