ವಿಜಯಪುರ: ಕೊನೆ ಕ್ಷಣದಲ್ಲಿ ಚುನಾವಣೆ ಚಿಹ್ನೆ ಕೊಡುವ ನೆಪದಲ್ಲಿ ಅನಕ್ಷರಸ್ಥ ಅಭ್ಯರ್ಥಿಗೆ ಅಧಿಕಾರಿಗಳು ವಂಚನೆ ಮಾಡಿದ್ದಾರೆಂಬ ಆರೋಪ ಕೇಳಿ ಬಂದಿದೆ.
ಚಿಹ್ನೆ ಕೊಡಬೇಕು ಸಹಿ ಮಾಡಿ ಎಂದು ಅಭ್ಯರ್ಥಿಯಿಂದ ಹೆಬ್ಬೆಟ್ಟು ಒತ್ತಿಸಿಕೊಂಡು ನಾಮಪತ್ರ ಹಿಂತೆಗೆಸಿದ ಆರೋಪ ಚುನಾವಣಾ ಅಧಿಕಾರಿಗಳ ವಿರುದ್ಧ ಕೇಳಿ ಬಂದಿದೆ. ದೇವರಹಿಪ್ಪರಗಿ ತಾಲೂಕಿನ ಚಿಕ್ಕರೂಗಿ ಗ್ರಾಮ ಪಂಚಾಯಿತಿಯಲ್ಲಿ ಈ ಪ್ರಕರಣ ಬೆಳಕಿಗೆ ಬಂದಿದೆ.
ಕಡ್ಲೇವಾಡ ಸಿಹೆಚ್ ಗ್ರಾಮದ 5ನೇ ವಾರ್ಡ್ಗೆ ಸ್ಪರ್ಧಿಸಿದ್ದ ಮಹಿಳಾ ಅಭ್ಯರ್ಥಿ ನಾಗಮ್ಮ ಬಿರಾದಾರ ತನಗೆ ಅಧಿಕಾರಿಗಳು ವಂಚಿಸಿದ್ದಾರೆ ಎಂದು ಆರೋಪಿಸಿ ಪ್ರತಿಭಟನೆ ನಡೆಸಿದರು.
ಅನಕ್ಷರಸ್ಥಳಾದ ನನಗೆ ಚಿಹ್ನೆ ಕೊಡುತ್ತೇವೆ ಎಂದು ನಾಮಪತ್ರ ವಾಪಸ್ ಪಡೆಯುವ ಪತ್ರಕ್ಕೆ ಹೆಬ್ಬೆಟ್ಟು ಒತ್ತಿಸಿಕೊಂಡಿದ್ದಾರೆ ಎಂದು ಅಭ್ಯರ್ಥಿ ನಾಗಮ್ಮ ಬಿರಾದಾರ ದೂರಿದ್ದಾರೆ. ಅಲ್ಲದೆ ಅವರ ಬೆಂಬಲಿಗರು ಪಂಚಾಯಿತಿ ಎದುರು ತಡರಾತ್ರಿಯವರೆಗೆ ಪ್ರತಿಭಟನೆ ನಡೆಸಿದ್ದಾರೆ.
ಚುನಾವಣಾ ಅಧಿಕಾರಿಗಳು ಎದುರಾಳಿ ಅಭ್ಯರ್ಥಿಗಳೊಂದಿಗೆ ಶಾಮೀಲಾಗಿ ನಮಗೆ ವಂಚಿಸಿದ್ದಾರೆ ಎಂಬುದು ನಾಗಮ್ಮ ಅವರ ಆರೋಪವಾಗಿದ್ದು, ತಮಗಾದ ಅನ್ಯಾಯದ ಬಗ್ಗೆ ಹಿರಿಯ ಅಧಿಕಾರಿಗಳಿಗೆ ದೂರು ಸಲ್ಲಿಸಲು ನಿರ್ಧರಿಸಿದ್ದಾರೆ. ಸ್ಥಳಕ್ಕೆ ಆಗಮಿಸಿದ್ದ ಪೊಲೀಸರು ಪ್ರತಿಭಟನಾಕಾರರ ಮನವೊಲಿಸಿ ಪ್ರತಿಭಟನೆ ಹಿಂದಕ್ಕೆ ತೆಗೆದುಕೊಳ್ಳುವಂತೆ ಮನವೊಲಿಸುವಲ್ಲಿ ಯಶಸ್ವಿಯಾದರು.