ವಿಜಯಪುರ: ವಿಜಯಪುರ ಜಿಲ್ಲೆಯ ಚಡಚಣ ತಾಲೂಕಿನ ಇಂಚಗೇರಿ ಮಠ ಜಾತ್ಯಾತೀತ ಮಠ. ಮಾಧವಾನಂದ ಪ್ರಭುಜಿ ತಮ್ಮ ಜೀವಿತಾವಧಿಯ ತುಂಬೆಲ್ಲ ಮಾಡಿದ್ದು ಬ್ರಿಟಿಷರ ವಿರುದ್ಧದ ಹೋರಾಟ. ತಮ್ಮ ಮಠದ ಸಾವಿರಾರು ಭಕ್ತರನ್ನು ಸ್ವಾತಂತ್ರ್ಯ ಹೋರಾಟಕ್ಕೆ ಧುಮುಕಿಸಿದ ರಾಷ್ಟ್ರದ ಏಕೈಕ ಸಂತ ಅನ್ನೋ ಹೆಗ್ಗಳಿಕೆಗೆ ಪಾತ್ರರಾದವರು. ಆದರೆ ಮಾಧವಾನಂದ ಪ್ರಭುಜಿ ಅವರ ಸ್ವಾತಂತ್ರ್ಯ ಹೋರಾಟವನ್ನು ಸರ್ಕಾರ, ಜಿಲ್ಲಾಡಳಿತ ಗುರುತಿಸಿಲ್ಲ ಎಂದು ಭಕ್ತರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಂಡ ರಾಷ್ಟ್ರದ ಬೆರಳಣಿಕೆ ಮಠಗಳ ಪೈಕಿ ಇಂಚಗೇರಿ ಮಠವೂ ಒಂದಾಗಿದೆ. 1935ರ ವೇಳೆಯಲ್ಲಿ ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಂಡ ಮಾಧವಾನಂದ ಪ್ರಭುಜಿಗಳು ತಮ್ಮೊಂದಿಗೆ 20ಸಾವಿರಕ್ಕೂ ಅಧಿಕ ಭಕ್ತರನ್ನು ಹೋರಾಟದಲ್ಲಿ ಧುಮುಕಿಸಿದ್ದರು.

1929ರ ಎಳೆಯ ಪ್ರಾಯದಲ್ಲೇ ಮಾಧವಾನಂದರು ಹೇಗಾದರು ಮಾಡಿ ಬ್ರಿಟಿಷರನ್ನು ತೊಲಗಿಸಲು ನಿರ್ಧರಿಸಿ ತಮ್ಮ ಅನುಯಾಯಿಗಳೊಂದಿಗೆ ಸೇರಿ ಹುಲಕೋಟೆ, ಸಾವಳಗಿ, ಇಂಚಗೇರಿ ಪೊಲೀಸ್ ಠಾಣೆಗಳಿಗೆ ಮುತ್ತಿಗೆ ಹಾಕಿ ಶಸ್ತ್ರಾಸ್ತ್ರಗಳನ್ನು ಅಪಹರಿಸಿದ್ದರು. ಹಲವು ಅಂಚೆ, ನಾಡ ಕಚೇರಿಗೆ ಬೆಂಕಿ ಹಚ್ಚಿದ್ರು. ಬ್ರಿಟಿಷರ ಸಂಪರ್ಕ ಸಾಧನವಾಗಿದ್ದ ರೈಲು ಹಳಿಗಳನ್ನು ಕಿತ್ತುಹಾಕಿ ಠಾಣೆಗಳನ್ನು ಧ್ವಂಸಗೊಳಿಸಿದ್ದರು.

ಸ್ವಾತಂತ್ರ್ಯ ಹೋರಾಟಕ್ಕಾಗಿ ತಮ್ಮ ಭಕ್ತರನ್ನು ಒಟ್ಟುಗೂಡಿಸಲು ಮಾಧವಾನಂದರು ತಮ್ಮ ವಾಹನದಲ್ಲಿ ಹೊರಟಿದ್ದಾಗ ಗೋಕಾಕ್ ಬಳಿ ಬ್ರಿಟಿಷ್ ಪೊಲೀಸರು ಇವರ ಮೇಲೆ ಗುಂಡು ಹಾರಿಸಿದ್ರು. ಹಲವು ಸುತ್ತು ಗಂಡು ಹಾರಿಸಿದ ಪೊಲೀಸರು ಬಂದು ನೋಡಿದಾಗ ಅಲ್ಲಿ ಮಾಧವಾನಂದರು ಇರಲೇ ಇಲ್ಲ. ಅವರು ಅಂದುಕೊಂಡಂತೆ ಗೋಕಾಕ್ ಬಳಿಯ ಹಳ್ಳಿಯೊಂದರಲ್ಲಿ ಸ್ವಾತಂತ್ರ್ಯ ಹೋರಾಟದ ಉದ್ದೇಶಕ್ಕಾಗಿ ನಡೆದ ಗುಪ್ತ ಸಭೆಯಲ್ಲಿ ಮಾಧವಾನಂದರು ಪಾಲ್ಗೊಂಡಿದ್ದರು. ಇದನ್ನು ಮಾಧವಾನಂದರ ಪವಾಡ ಎನ್ನಲಾಗಿದೆ. ಈ ಚಮತ್ಕಾರವನ್ನು ಕಂಡಿದ್ದ ಬ್ರಿಟಿಷ್ ಪೊಲೀಸರು ಮತ್ತೆಂದಿಗೂ ಮಾಧವಾನಂದರ ಮೇಲೆ ಗುಂಡು ಹಾರಿಸುವ ಪ್ರಯತ್ನಕ್ಕೆ ಹೋಗಲಿಲ್ಲವಂತೆ. ಹೀಗಾಗಿ ಮಾಧವಾನಂದರ ಅನುಯಾಯಿಗಳು ಅವರನ್ನು ದೇವರು ಅಂತಲೇ ಸಂಭೋದಿಸುತ್ತಿದ್ದರು.

ಇದನ್ನೂ ಓದಿ: ಆಧುನಿಕ ಯಾತ್ರಾಸ್ಥಳವಾಗಲಿದೆ ರಾಜಾಧಿರಾಜ ಗೋವಿಂದ ದೇವಸ್ಥಾನ: ರಾಷ್ಟ್ರಪತಿ ಕೋವಿಂದ್
ಇಂತಹ ಅಪ್ರತಿಮ ಸ್ವಾತಂತ್ರ್ಯ ಹೋರಾಟಗಾರರ ನಮ್ಮೊಂದಿಗಿಲ್ಲ. ಇದೀಗ ದೇಶದಲ್ಲಿ ಅಮೃತ ಮಹೋತ್ಸವ ಆಚರಿಸಲಾಗುತ್ತಿದೆ. ಆದ್ರೆ ಮಾಧವಾನಂದ ಪ್ರಭುಜಿಗಳ ಕುರಿತಾಗಿ ಸರ್ಕಾರ, ಜಿಲ್ಲಾಡಳಿತ ಗೌರವ ಕಾರ್ಯ ಮಾಡದೇ ಇರೋದು ಭಕ್ತರಲ್ಲಿ ನೋವು ತರಿಸಿದೆ.