ವಿಜಯಪುರ: ಸಿಎಂ ಬಿ.ಎಸ್. ಯಡಿಯೂರಪ್ಪ ಅವರ ನೇತೃತ್ವದಲ್ಲಿ ಬಿಜೆಪಿ ಸರ್ಕಾರ ಪೂರ್ಣಾವಧಿ ಅಧಿಕಾರ ನಡೆಸುತ್ತದೆ ಎಂದು ನೂತನ ಸಚಿವ ಗೋವಿಂದ ಕಾರಜೋಳ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಜಿಲ್ಲೆಯ ಆಲಮಟ್ಟಿಯಲ್ಲಿ ಮಾತನಾಡಿದ ಅವರು, ಮುಂದಿನ ಸಲ ಮತ್ತೆ ಬಿಜೆಪಿ ಅಧಿಕಾರಕ್ಕೆ ಬರುತ್ತದೆ ಬರೆದುಕೊಳ್ಳಿ ಎಂದರು. ಚುನಾವಣೆಯಲ್ಲಿ ಸೋತವರಿಗೆ ಸಚಿವ ಸ್ಥಾನ ವಿಚಾರವಾಗಿ ಪ್ರತಿಕ್ರಿಯಿಸಿ, ಅದು ಹೈಕಮಾಂಡ್ಗೆ ಬಿಟ್ಟ ವಿಚಾರ ಎಂದರು.
ಬಿಜೆಪಿ ಹಿರಿಯ ಶಾಸಕರ ಅಸಮಾಧಾನ ವಿಚಾರವಾಗಿ ಮಾತನಾಡಿ, ರಾಜಕಾರಣದಲ್ಲಿ ಯಾರು ಸಂನ್ಯಾಸಿಗಳಲ್ಲ, ಶಾಸಕರು ಮನೆ ಮಠ ಬಿಟ್ಟು ಕಾವಿ ಹಾಕುವುದಿಲ್ಲ ಎಂದರು. ಶಾಸಕರಿಗೆ ಮುಂದಿನ ಹುದ್ದೆಗೆ ಹೋಗಬೇಕು ಎನ್ನುವ ಆಸೆ ಆಕಾಂಕ್ಷೆ ಇರುತ್ತದೆ. ಸಚಿವ ಸಂಪುಟ ಇನ್ನು ಪೂರ್ಣ ಆಗಿಲ್ಲ, ಉಳಿದವರಿಗೆ ಮುಂದಿನ ಅವಧಿಗೆ ಇನ್ನೂ ಅವಕಾಶಗಳಿವೆ. ಕೇವಲ 50% ಸಂಪುಟ ವಿಸ್ತರಣೆ ಆಗಿದೆ ಎಂದರು. ಅಲ್ಲದೇ ನಾನು ಯಾವುದೇ ಖಾತೆ ನೀಡುವಂತೆ ಬೇಡಿಕೆ ಇಟ್ಟಿಲ್ಲ. ನಾನು ಯಾವುದನ್ನೂ ಬೇಡಿ ಪಡೆಯುವುದಿಲ್ಲ. ಯಾವ ಖಾತೆ ನೀಡಿದರೂ ನಿಭಾಯಿಸುತ್ತೇನೆ ಎಂದಿದ್ದಾರೆ.