ಮುದ್ದೇಬಿಹಾಳ(ವಿಜಯಪುರ): ಜಿಲ್ಲಾ ಉಸ್ತುವಾರಿ ಸಚಿವರು, ಜಿಲ್ಲಾಧಿಕಾರಿಗಳು ಕ್ವಾರಂಟೈನ್ ಕೇಂದ್ರಗಳಿಗೆ ಭೇಟಿ ನೀಡಿ ಅಲ್ಲಿನ ಸ್ಥಿತಿಗತಿಯನ್ನು ಮೊದಲು ಪರಿಶೀಲನೆ ನಡೆಸಬೇಕು. ಸಾಂಸ್ಥಿಕ ಕ್ವಾರಂಟೈನ್‌ಲ್ಲಿರುವ ಕೂಲಿ ಕಾರ್ಮಿಕರಿಗೆ ರಾಜ್ಯ ಸರಕಾರವೇ ಎರಡು ತಿಂಗಳಿಗಾಗುವಷ್ಟು ಜೀವನಾವಶ್ಯಕ ವಸ್ತುಗಳ ಕಿಟ್‌ನ್ನು ವಿತರಿಸಲು ಮುಂದಾಗಬೇಕು ಎಂದು ಮುದ್ದೇಬಿಹಾಳ ಮತಕ್ಷೇತ್ರದ ಶಾಸಕ ಎ. ಎಸ್. ಪಾಟೀಲ ನಡಹಳ್ಳಿ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಮತಕ್ಷೇತ್ರದ ತಾಳಿಕೋಟಿ ತಾಲೂಕಿನಲ್ಲಿ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಇವತ್ತು ನಮ್ಮದೇ ಸರ್ಕಾರ ಇದ್ದರೂ ಕೂಡಾ ಜಿಲ್ಲಾಧಿಕಾರಿಗಳಿಗೆ ಮತ್ತು ಜಿಲ್ಲಾ ಉಸ್ತುವಾರಿ ಸಚಿವರಿಗೆ ನಾನು ಮನವಿ ಮಾಡುತ್ತೇನೆ. ಒತ್ತಾಯವೂ ಕೂಡಾ ಮಾಡುತ್ತೇನೆ. ಕೂಡಲೇ ಬಡ ಕೂಲಿ ಕಾರ್ಮಿಕರ ಸಹಾಯಕ್ಕೆ ಬರಬೇಕು. ಕಾರ್ಮಿಕರಲ್ಲಿ ಪಡಿತರ ಚೀಟಿ ಇದೆಯೋ ಇಲ್ಲವೋ ಗೊತ್ತಿಲ್ಲಾ. ಅವರಿಗೆ ಮತ್ತೆ ಜೀವನ ಕಟ್ಟಿಕೊಳ್ಳಬೇಕೆಂದರೆ ಕನಿಷ್ಠ ಪಕ್ಷ 2 ತಿಂಗಳ ಸಮಯ ಬೇಕು. ಅಲ್ಲಿಯವರೆಗೆ ಅಗತ್ಯವಿರುವ ಅಕ್ಕಿ, ಗೋಧಿ ಜೊತೆಗೆ ಅಗತ್ಯ ವಸ್ತುಗಳ ಪೂರೈಕೆಯನ್ನು ಮಾಡಬೇಕೆಂದು ಹೇಳಿದರು.
ಮಹಾರಾಷ್ಟ ಮತ್ತು ಇತರೆ ರಾಜ್ಯಗಳಿಗೆ ದುಡಿಯಲು ಹೋಗಿ ಸಂಕಷ್ಟದ ಸ್ಥಿತಿ ಅನುಭವಿಸಿ ಸದ್ಯ ರಾಜ್ಯಕ್ಕೆ ಮರಳಿ ಬಂದಿದ್ದಾರೆ. ಸಾಂಸ್ಥಿಕ ಕ್ವಾರಂಟೈನ್‌ಗೆ ಒಳಪಟ್ಟ ಬಡ ಕೂಲಿಕಾರ್ಮಿಕರ ಜೀವನೋಪಾಯಕ್ಕೆ ಅಡಿಪಾಯ ಹಾಕಲು ಸರ್ಕಾರವು ಕೂಡಲೇ ಮುಂದೆ ಬರಬೇಕು. ಕೊರೊನಾ ವೈರಸ್ ಹಾವಳಿ ಶುರುವಾದಾಗಿನಿಂದಲೂ ಕಾಲಿಗೆ ಚಕ್ರ ಕಟ್ಟಿಕೊಂಡು ಕ್ಷೇತ್ರದಲ್ಲಿ ಸಂಚರಿಸಿದ್ದೇನೆ. ಬಡ ಕೂಲಿಕಾರ್ಮಿಕರ ಸಮಸ್ಯೆ ಏನು ಎಂಬುದನ್ನು ತಿಳಿದುಕೊಂಡಿದ್ದೇನೆ. ಎಷ್ಟೋ ಸಾರಿ ಅವರ ಕಷ್ಟ ಕಣ್ಣಾರೆ ಕಂಡು ಕಣ್ಣೀರು ಸುರಿಸಿದ್ದೇನೆ ಹೀಗಾಗಿ ಕೂಡಲೇ ಸರ್ಕಾರ ನೊಂದವರ, ಸಂಕಷ್ಟದಲ್ಲಿ ಸಿಲುಕಿದವರ ನೆರವಿಗೆ ಧಾವಿಸಬೇಕು ಎಂದು ಶಾಸಕರು ಒತ್ತಾಯಿಸಿದರು.