ವಿಜಯಪುರ: ಸರ್ಕಾರಿ ವಸತಿ ನಿಲಯಗಳಲ್ಲಿ ಹೊರಗುತ್ತಿಗೆ ಆಧಾರದಲ್ಲಿ ದುಡಿಯುತ್ತಿರುವ ನೌಕರರ ಬಾಕಿ ವೇತನ ಪಾವತಿಸುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ಸರ್ಕಾರಿ ಹಾಸ್ಟೆಲ್ ಮತ್ತು ವಸತಿ ಶಾಲಾ ಗುತ್ತಿಗೆ ನೌಕರರ ಸಂಘಟನೆಯಿಂದ ಪ್ರತಿಭಟಿಸಲಾಯಿತು.
ನಗರದ ಜಿಲ್ಲಾ ಪಂಚಾಯತ್ ಕಚೇರಿ ಮುಂಭಾಗದಲ್ಲಿ ನಡೆಸಿದ ನೌಕರರು, ಸರ್ಕಾರ ವಸತಿ ನಿಲಯಗಳಲ್ಲಿ ಕಡಿಮೆ ಸಂಬಳದಲ್ಲಿ ದುಡಿಯುತ್ತಿರುವ ಕಾರ್ಮಿಕರಿಗೆ ಅನ್ಯಾಯ ಮಾಡುತ್ತಿದೆ. ಸಕಾಲಕ್ಕೆ ವೇತನ ಪಾವತಿಸಿಲ್ಲ. ಹಲವು ತಿಂಗಳಿಂದ ವೇತನ ಬಾಕಿ ಉಳಸಿಕೊಂಡ ಪರಿಣಾಮ ಹೊರಗುತ್ತಿಗೆ ಕಾರ್ಮಿಕರು ಆರ್ಥಿಕ ಸಂಕಷ್ಟ ಅನುಭವಿಸುವಂತಾಗಿದೆ ಎಂದು ಕಿಡಿಕಾರಿದರು.
ಇನ್ನು, ಇಎಸ್ಐ ಹಾಗೂ ಪಿಎಫ್ ಅನ್ನು ಎಲ್ಲ ನೌಕರರಿಗೂ ವಿಸ್ತರಣೆ ಮಾಡಬೇಕು. ಹೊರಗುತ್ತಿಗೆ ಆಧಾರಿತವಾಗಿ ಸಮಾಜ ಕಲ್ಯಾಣ, ಬಿಸಿಎಂ, ಹಾಗೂ ವಸತಿ ಶಾಲೆಗಳ ವಿದ್ಯಾರ್ಥಿ ನಿಲಯಗಳಲ್ಲಿ ದುಡಿಯುತ್ತಿರುವ ನೌಕರರಿಗೆ ಏಜನ್ಸಿಗಳಿಂದ ವೇತನ ಕೊಡಿಸಬೇಕು. ಇತ್ತ ಖಾಯಂ ನೌಕರರ ವರ್ಗಾವಣೆ ಆರಂಭವಾಗಿದ್ದು, ಗುತ್ತಿಗೆ ಆಧಾರಿತವಾಗಿ ದುಡಿಯುತ್ತಿರುವ ಹಾಸ್ಟೆಲ್ ನೌಕರರ ಸ್ಥಳಕ್ಕೆ ವರ್ಗ ಮಾಡದಂತೆ ಪ್ರತಿಭಟನಾಕಾರರು ಒತ್ತಾಯಿಸಿದರು.
ಇನ್ನು, ಧರಣಿ ಸ್ಥಳಾಕ್ಕಗಮಿಸಿದ ಜಿಲ್ಲಾ ಪಂಚಾಯತ್ ಕಾರ್ಯ ನಿರ್ವಾಹಕಾಧಿಕಾರಿ ಗೋವಿಂದ ರೆಡ್ಡಿ, ತಮ್ಮ ಬೇಡಿಕೆಗಳನ್ನು ಈಡೇರಿಸಲು ಕ್ರಮ ಕೈಗೊಳ್ಳಲಾಗುವುದು, ಅಹೋರಾತ್ರಿ ಧರಣಿ ನಿಲ್ಲಿಸುವಂತೆ ಮನವಿ ಮಾಡಿದರು.