ವಿಜಯಪುರ : ವಿಜಯಪುರ ಜಿಲ್ಲೆಯ ಪ್ರತ್ಯೇಕ ಕಡೆ ಎರಡು ರಸ್ತೆ ಅಪಘಾತಗಳು ನಡೆದಿದ್ದು, ಇಬ್ಬರು ಮೃತಪಟ್ಟಿದ್ದಾರೆ. ದೇವರ ದರ್ಶನಕ್ಕೆ ಎಂದು ಬೈಕ್ನಲ್ಲಿ ತಂದೆಯೊಂದಿಗೆ ಮಗಳು ಹೋಗುವಾಗ ಮಹಾರಾಷ್ಟ್ರದ ಸಾರಿಗೆ ಬಸ್ ಡಿಕ್ಕಿ ಹೊಡೆದು ಭೀಕರ ರಸ್ತೆ ಅಪಘಾತ ವಿಜಯಪುರ ಜಿಲ್ಲೆ ತಿಕೋಟಾ ಪಟ್ಟಣದಲ್ಲಿ ಸಂಭವಿಸಿದೆ. ಘಟನೆಯಲ್ಲಿ ಬೈಕ್ ಹಿಂಬದಿ ಕುಳಿತಿದ್ದ ಬಾಲಕಿ ಸವಿತಾ ಪೂಜಾರಿ (15) ಸಾವನ್ನಪ್ಪಿದ್ದು, ಬೈಕ್ ಸವಾರ ತಂದೆ ಮುದಗೊಂಡ ಅವರು ಗಾಯಗೊಂಡಿದ್ದಾರೆ.
ತಂದೆ ಹಾಗೂ ಮಗಳು ಜಿಲ್ಲೆಯ ತಿಕೋಟಾ ತಾಲೂಕಿನ ಅರಕೇರಿ ಅಮೋಘ ಸಿದ್ದೇಶ್ವರ ದೇವಸ್ಥಾನಕ್ಕೆ ತೆರಳುತ್ತಿದ್ದರು. ಈ ವೇಳೆ, ಮಹಾರಾಷ್ಟ್ರದ ಸರ್ಕಾರಿ ಬಸ್ ಡಿಕ್ಕಿ ಹೊಡೆದಿದ್ದು, ಪರಿಣಾಮ ಸ್ಥಳದಲ್ಲೇ ಬಾಲಕಿ ಮೃತಪಟ್ಟಿದ್ದಾಳೆ. ಗಾಯಾಳು ತಂದೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಇನ್ನೊಂದೆಡೆ ಮಾಹಿತಿ ತಿಳಿದ ತಕ್ಷಣ ಸ್ಥಳಕ್ಕೆ ಬಂದ ತಿಕೋಟಾ ಪೊಲೀಸರು ಪರಿಶೀಲನೆ ನಡೆಸಿ ಬಸ್ ಸಮೇತ ಚಾಲಕನನ್ನು ವಶಕ್ಕೆ ಪಡೆದಿದ್ದು, ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಟ್ರ್ಯಾಕ್ಟರ್ -ಬೈಕ್ ಮುಖಾಮುಖಿ : ವಿಜಯಪುರ ನಗರದ ಅಥಣಿ ರಸ್ತೆಯಲ್ಲಿ ಮಿನಿ ಟ್ರ್ಯಾಕ್ಟರ್ ಹಾಗೂ ಬೈಕ್ ಮಧ್ಯೆ ಮುಖಾಮುಖಿ ಡಿಕ್ಕಿಯಾಗಿರುವ ಪರಿಣಾಮ ಬೈಕ್ ಸವಾರ ಸ್ಥಳದಲ್ಲಿ ಸಾವನ್ನಪ್ಪಿದ್ದಾನೆ. ಮೃತಪಟ್ಟಿರುವ ಬೈಕ್ ಸವಾರನ ಹೆಸರು ಹಾಗೂ ಮಾಹಿತಿ ಲಭ್ಯವಾಗಿಲ್ಲ. ಅಲ್ಲದೇ, ಮಿನಿ ಟ್ರ್ಯಾಕ್ಟರ್ ಚಾಲಕ ಟ್ರ್ಯಾಕ್ಟರ್ ಬಿಟ್ಟು ಪರಾರಿಯಾಗಿದ್ದಾನೆ. ವಿಜಯಪುರ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಲ್ಲದೆ, ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ.
ಕಾರಿನ ಟೈಯರ್ ಸ್ಫೋಟಗೊಂಡು ಡಿವೈಡರ್ಗೆ ಡಿಕ್ಕಿ : ಕಳೆದ ಎರಡು ದಿನಗಳಿಂದೆ ಡಿ.11 ರಂದು ಚನ್ನಪಟ್ಟಣ ತಾಲೂಕಿನ ಬೈರಾಪಟ್ಟಣ ಬಳಿ ಕಾರಿನ ಟೈಯರ್ ಸ್ಫೋಟಗೊಂಡು ಡಿವೈಡರ್ಗೆ ಡಿಕ್ಕಿ ಹೊಡೆದ ಪರಿಣಾಮ ಐವರು ಗಾಯಗೊಂಡಿದ್ದರು. ಕಾರಿನಲ್ಲಿ ಚಾಲಕ ಸೇರಿ ಐವರು ಪ್ರಯಾಣಿಕರು ಮೈಸೂರಿನಿಂದ ಬೆಂಗಳೂರಿಗೆ ತೆರಳುತ್ತಿದ್ದರು. ಈ ವೇಳೆ, ತಾಲೂಕಿನ ಬೈರಾಪಟ್ಟಣ ಬಳಿ ಬರುತ್ತಿದ್ದಂತೆ ಏಕಾಏಕಿ ಕಾರಿನ ಟೈಯರ್ ಸ್ಫೋಟಗೊಂಡಿತ್ತು. ಘಟನಾ ಸ್ಥಳಕ್ಕೆ ಚನ್ನಪಟ್ಟಣ ಸಂಚಾರಿ ಪೊಲೀಸರು ಭೇಟಿ, ಪರಿಶೀಲನೆ ನಡೆಸಿದ್ದರು. ಗಾಯಗೊಂಡವರನ್ನು ಚನ್ನಪಟ್ಟಣ ತಾಲೂಕು ಆಸ್ಪತ್ರೆಗೆ ರವಾನಿಸಲಾಗಿತ್ತು. ಚನ್ನಪಟ್ಟಣ ಸಂಚಾರಿ ಠಾಣೆಯಲ್ಲಿ ಈ ಕುರಿತು ದೂರು ದಾಖಲಾಗಿತ್ತು.
ಇದನ್ನೂ ಓದಿ : ರಾಮನಗರ: ಎರಡು ಪ್ರತ್ಯೇಕ ರಸ್ತೆ ಅಪಘಾತ ಪ್ರಕರಣ; ಇಬ್ಬರ ಸಾವು, ಐವರಿಗೆ ಗಾಯ