ವಿಜಯಪುರ: ಪರಿಸರ ಪ್ರೇಮ, ಆರೋಗ್ಯ ರಕ್ಷಣೆ ಹಾಗೂ ಮನೆಯ ಸೌಂದರ್ಯ ಹೆಚ್ಚಿಸುವ ಮಹಾದಾಸೆಯಿಂದ ಇಲ್ಲೊಂದು ಕುಟುಂಬ ಮನೆಯಲ್ಲಿಯೇ ಸುಂದರ ಹೂದೋಟ ನಿರ್ಮಿಸಿ ಇತರರಿಗೆ ಮಾದರಿಯಾಗಿದ್ದಾರೆ. ಮನೆಯ ಮಾಳಿಗೆಯಲ್ಲಿ ಸುಮಾರು 250ಕ್ಕೂ ಹೆಚ್ಚು ವಿವಿಧ ಹೂವು, ಆಯುರ್ವೇದಿಕ ಹಾಗೂ ಸೌಂದರ್ಯ ಹೆಚ್ಚಿಸುವ ಸಸಿಗಳನ್ನು ಬೆಳೆದಿದ್ದಾರೆ.
ನಗರದ ರಾಮಮಂದಿರ ರಸ್ತೆಯಲ್ಲಿರುವ ಚಿನ್ನದ ವ್ಯಾಪಾರಿ ಸಚಿನ್ ಪಂಡಿತ ಕುಟುಂಬ ತಮ್ಮ ಮನೆಯನ್ನು ಹೂವಿನ ತೋಟವಾಗಿ ಮಾಡಿಕೊಂಡಿದ್ದಾರೆ. ಮನೆಯ ಮೊದಲನೇ ಮಹಡಿಯಲ್ಲಿ 15/15 ಸ್ಕ್ವೇರ್ ಫೀಟ್ ಜಾಗವನ್ನು ಅಲಂಕಾರಿಕ ಸಸಿಗಳನ್ನು ಬೆಳೆಸಲು ಬಿಟ್ಟಿದ್ದಾರೆ. ಮಲ್ಲಿಗೆ, ಸಂಪಿಗೆ, ಗುಲಾಬಿ ಹೂವುಗಳು ಸೇರಿದಂತೆ ನಾನಾ ತರನಾದ ಸಸಿಗಳನ್ನು ನೆಟ್ಟು ಅವುಗಳನ್ನು ಪೋಷಿಸುತ್ತಿದ್ದಾರೆ. ಪ್ರತಿ ವರ್ಷ ವಿಶ್ವ ಪರಿಸರ ದಿನದಂದು ಒಂದು ಸಸಿ ತಂದು ಅದನ್ನು ಪೋಷಿಸುವ ಕೆಲಸ ಮಾಡುತ್ತಿದ್ದಾರೆ. ಅವರ ಮನೆಯೊಳಗೆ ಹೋದರೆ ಸಾಕು, ಎಲ್ಲ ಕಡೆಯೂ ಹೂವಿನ ಗಿಡಗಳೇ ಕಾಣ ಕಾಣುತ್ತದೆ.
ಮನೆ ಮಾಲೀಕನಿಗೆ ಅವರ ಇಡಿ ಕುಟುಂಬ ಸಾಥ್ ನೀಡುತ್ತಿದೆ. ಕಸದಿಂದ ರಸ ಎಂಬಂತೆ ಮನೆಯಲ್ಲಿನ ನಿರುಪಯುಕ್ತ ವಸ್ತುಗಳನ್ನೇ ಹೆಚ್ಚಾಗಿ ಬಳಸಿ ಅವುಗಳಲ್ಲಿ ಸಸಿಗಳನ್ನು ನೆಟ್ಟು ಪೋಷಿಸುತ್ತಿದ್ದಾರೆ. ಅಂದಕ್ಕೆ ಮಾತ್ರವಲ್ಲದೇ ಮನೆಯಲ್ಲಿ ಶುದ್ಧ ಗಾಳಿ ಬರಲಿ ಎನ್ನುವ ಸದುದ್ದೇಶ ಹೊಂದಿದ್ದಾರೆ.
ಇದನ್ನೂ ಓದಿ: ಬಿಡಾಡಿ ದನಗಳಿಗೆ ಆಸರೆಯಾದ ಆಧುನಿಕ 'ಬಾಪು': ಗೋಶಾಲೆ ತೆರೆದ ಮುದ್ದೇಬಿಹಾಳ ರೈತ
ಪರಿಸರ ಪ್ರೇಮ ಬೆಳೆಸಿಕೊಳ್ಳುವುದು ತಮ್ಮ ಕುಟುಂಬಕ್ಕೂ ಉತ್ತಮ ಎನ್ನುವ ಸಂದೇಶ ಸಾರಿದ್ದಾರೆ. ಮನೆ ಅಲ್ಪ ಜಾಗವನ್ನು ಸದುಪಯೋಗ ಪಡಿಸಿಕೊಂಡರೆ ಮನೆಯ ಸೌಂದರ್ಯ ಹೆಚ್ಚಿಸುವುದರ ಜತೆಗೆ ಆರೋಗ್ಯ ಕಾಪಾಡಬಹುದು ಎನ್ನುವುದನ್ನು ತೋರಿಸಿಕೊಟ್ಟಿದ್ದಾರೆ.