ವಿಜಯಪುರ: ಕೊರೊನಾ ವೈರಸ್ ಭೀತಿ ಹಿನ್ನೆಲೆ ಪ್ರತಿ ವರ್ಷದ ಗಣೇಶ ಉತ್ಸವ ಕಾರ್ಯಕ್ರಮಗಳಿಗೆ ಜಿಲ್ಲಾಡಳಿತ ಬ್ರೇಕ್ ಹಾಕಿದ್ದು, ವಿನಾಯಕ ಚತುರ್ಥಿ ವೈಭವ ಕಳೆಗುಂದಿದೆ.
ನಗರದ ಎಲ್‌ಬಿಎಸ್ ಮಾರುಕಟ್ಟೆ, ಸ್ಟೇಷನ್ ರಸ್ತೆ ಸೇರಿದಂತೆ ನಗರದ ಬಹುತೇಕ ಭಾಗದಲ್ಲಿ ಜನರು ಹಬ್ಬದ ಅಗತ್ಯ ಸಾಮಗ್ರಿಗಳು ಹಾಗೂ ಗಣೇಶನ ವಿಗ್ರಹಗಳ ಖರೀದಿಯಲ್ಲಿ ತೊಡಗಿದ್ದರು. ಅಲ್ಲದೆ ಜಿಲ್ಲಾಡಳಿತ, ಮಹಾನಗರ ಪಾಲಿಕೆ ಪಿಓಪಿ ವಿಗ್ರಹದ ಬದಲು ಮಣ್ಣಿನ ಗಣಪತಿ ವಿಗ್ರಹ ಪೂಜಿಸುವಂತೆ ಕರೆ ನೀಡಿದೆ.
ಮನೆಯಲ್ಲಿ ಗರಿಷ್ಠ 2 ಅಡಿ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಗರಿಷ್ಠ 4 ಅಡಿ ಎತ್ತರದ ವಿಗ್ರಹ ಸ್ಥಾಪನೆ ಮಾಡಲು ಸರ್ಕಾರದ ನಿಯಮಾವಳಿಗಳ ಪ್ರಕಾರ ಅವಕಾಶವಿದೆ. ಪಟಾಕಿ ಸಿಡಿಸದಂತೆ ಹಾಗೂ ಮೆರವಣಿಗೆ ಮಾಡದೆ ಸರಳವಾಗಿ ವಿನಾಯಕನ ಮೂರ್ತಿ ಪ್ರತಿಷ್ಠಾಪಿಸುವಂತೆ ಸಾರ್ವಜನಿಕರಿಗೆ ಸೂಚಿಸಲಾಗಿದೆ. ಮಹಾನಗರ ಪಾಲಿಕೆ ಸಾರ್ವಜನಿಕ ಗಣಪತಿ ವಿಸರ್ಜನೆ ಮಾಡಲು ನಗರದ ಹಲವು ಬಡಾವಣೆಗಳಲ್ಲಿ 10 ಕೃತಕ ಹೊಂಡ ನಿರ್ಮಿಸಿದೆ.
ಮಾಹಾನಗರ ಪಾಲಿಕೆ ಆಯುಕ್ತರು ಹೇಳುವ ಪ್ರಕಾರ, ಕಳೆದ ವರ್ಷಕ್ಕೆ ಹೊಲಿಕೆ ಮಾಡಿದರೆ ಈ ವರ್ಷ ಶೇ 70 ರಷ್ಟು ಜನ ಮಣ್ಣಿನ ಗಣೇಶ ಮೂರ್ತಿ ಖರೀದಿಗೆ ಮುಂದಾಗಿದ್ದಾರೆ. ಪಟಾಕಿ ಸಿಡಿಸಲು ಅನುಮತಿಯಿಲ್ಲ. ಮನೆಯಲ್ಲಿ ಪೂಜಿಸುವ ಮೂರ್ತಿಗಳನ್ನು ಸಾರ್ವಜನಿಕರು ವಿಸರ್ಜನೆ ಮಾಡಲಾಗದಿದ್ದರೆ ಪಾಲಿಕೆಯ ಸಿಬ್ಬಂದಿಯೇ ವಿಸರ್ಜನೆ ಮಾಡುತ್ತಾರೆ. ಸರ್ಕಾರದ ನಿರ್ದೇಶನ ಪಾಲಿಸದಿದ್ದರೆ ಅವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.