ವಿಜಯಪುರ: ಬಬಲೇಶ್ವರ ಗ್ರಾಮ ಪಂಚಾಯಿತಿಯನ್ನು ಪಟ್ಟಣ ಪಂಚಾಯಿತಿಯಾಗಿ ಮೇಲ್ದರ್ಜೆಗೇರಿಸಲು ಸಿಎಂ ಬಳಿ ನಾನು ಮಾಡಿದ ಮನವಿ ಕಾರಣ, ಸಂಪುಟ ಸಭೆಯಲ್ಲಿ ಅನುಮೋದನೆ ಸಿಕ್ಕಿತ್ತು ಎಂದು ಬಿಜೆಪಿ ಮುಖಂಡ ವಿಜುಗೌಡ ಪಾಟೀಲ್ ಹೇಳಿದ್ದಾರೆ.
ಕಾಂಗ್ರೆಸ್ನವರು ಇದು ನಮ್ಮ ಕಾರ್ಯ ಎಂದು ಹೇಳಿಕೊಂಡು ಕರಪತ್ರ ಹಂಚುವುದು ಸರಿಯಲ್ಲ ಎಂದು ಶಾಸಕ ಎಂ.ಬಿ ಪಾಟೀಲ್ಗೆ ತಿರುಗೇಟು ನೀಡಿದ್ದಾರೆ.
ನಗರದಲ್ಲಿ ಮಾಧ್ಯಮಗೋಷ್ಠಿ ನಡೆಸಿ ಮಾತನಾಡಿದ ಅವರು, ನನ್ನ ಶ್ರಮದಿಂದ ಪಟ್ಟಣ ಪಂಚಾಯಿತಿಯಾಗಿದೆ ಎಂದು ಹೇಳಿಕೊಳ್ಳುವ ಶಾಸಕರಿಗೆ ಅವರ ಸರ್ಕಾರದ ಅವಧಿಯಲ್ಲಿ ಪಟ್ಟಣ ಪಂಚಾಯಿತಿ ಮಾಡಲು ಯಾಕೆ ಆಗಲಿಲ್ಲ? ಎಂದು ಪ್ರಶ್ನಿಸಿದರು.
ಇತ್ತ ಬಬಲೇಶ್ವರ ಕ್ಷೇತ್ರ ಅಭಿವೃದ್ಧಿಯಲ್ಲಿ ಕೇಂದ್ರ ಸರ್ಕಾರದ ಯೋಜನೆಗಳನ್ನು ತಾವೇ ಮಾಡಿದ್ದು ಎಂದು ಹೇಳಿಕೊಳ್ಳುತ್ತಿದ್ದಾರೆ. ಅಲ್ಲದೆ 75 ಲಕ್ಷ ರೂ ವೆಚ್ಚದಲ್ಲಿ ಎಪಿಎಂಸಿ ಮಾರುಕಟ್ಟೆಯನ್ನು ನಾನು ಮಂಜೂರು ಮಾಡಿಸಿದರೆ, ಅಧಿಕಾರಿಗಳ ಮೇಲೆ ದಬ್ಬಾಳಿಕೆ ಮಾಡಿ ಬೇರೆ ಸ್ಥಳದಲ್ಲಿ ಪೂಜೆ ಮಾಡಿರುವುದು ದುರ್ದೈವ. ಪ್ರಧಾನಮಂತ್ರಿ ಗ್ರಾಮೀಣಾಭಿವೃದ್ಧಿಗೆ ಚಾಲನೆ ನೀಡಿದ ಶಾಸಕರು, ಕೇಂದ್ರ ಸರ್ಕಾರದ ಬ್ಯಾನರ್ ಕೂಡ ಹಾಕಲಿಲ್ಲ. ಜಿಲ್ಲೆಯ ಸಂಸದರ ಒಂದು ಫೋಟೋ ಹಾಕಿಲ್ಲ ಎಂದರು.
ಅಧಿಕಾರಿಗಳ ಮೇಲೆ ದಬ್ಬಾಳಿಕೆ ಮಾಡಿ ಕಾಮಗಾರಿ ಚಾಲನೆ ನೀಡುವುದು ಸಣ್ಣತನ. ಚುನಾವಣೆಯಲ್ಲಿ ನಾನು 3 ಬಾರಿ ಸೋತಿರಬಹುದು. ನನಗೆ ಗೆಲುವಿನ ಸರ್ಟಿಫಿಕೇಟ್ ಸಿಕ್ಕಿಲ್ಲ. ಹಾಗಂತ ನಾನು ಜನರ ಮನಸ್ಸಿನಲ್ಲಿ ಸೋತಿಲ್ಲ. ಯಾರಿಗೂ ಮೋಸ ಮಾಡಿಲ್ಲ. ಕಾಂಗ್ರೆಸ್ ಅಧಿಕಾರವಧಿಯಲ್ಲಿ ಬಂದ ಅಧಿಕಾರಿಗಳು ಜಿಲ್ಲೆಯಲ್ಲಿದ್ದಾರೆ. ಅದೇ ಅಧಿಕಾರಿಗಳು ನಮ್ಮನ್ನ ತುಳಿಯುತ್ತಿರುವುದು ಗೊತ್ತಾಗುತ್ತಿಲ್ಲ. ಅವರನ್ನು ಎತ್ತಂಗಡಿ ಮಾಡಬೇಕು. ನಮ್ಮ ಪಕ್ಷದ ರಾಜಕಾರಣಿಗಳಲ್ಲಿ ಹೊಂದಾಣಿಕೆಯ ಕೊರತೆ ಇರುವ ಕಾರಣ ಹೀಗಾಗುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು.
ಅಲ್ಲದೆ 140 ಕೋಟಿ ರೂಪಾಯಿ ವೆಚ್ಚದ ನೀರಾವರಿ ಯೋಜನೆಗೆ ಚಾಲನೆ ನೀಡಿದ್ದು ನಮ್ಮ ಸರ್ಕಾರಕ್ಕೆ ಅಭಿನಂದನೆ ಹೇಳುವುದನ್ನು ಬಿಟ್ಟು, ನಾನೇ ಮಾಡಿದ್ದು ಎಂದು ಶಾಸಕರು ಹೇಳುತ್ತಿದ್ದಾರೆ. ಇದು ಎಷ್ಟು ಸರಿ ಎಂದು ಪ್ರಶ್ನಿಸಿದರು. ಬಬಲೇಶ್ವರ ಶಾಸಕರು ಹಾಗೂ ಕಾಂಗ್ರೆಸ್ ಪ್ರಭಾವಿ ನಾಯಕ ಬಿಜೆಪಿಗೆ ಆಹ್ವಾನಿಸಲಾಗುತ್ತಿದೆ? ಎಂಬ ಪ್ರಶ್ನೆಗೆ ಉತ್ತರಿಸಿದ ಬಿಜೆಪಿ ಮುಖಂಡ ವಿಜುಗೌಡ ಪಾಟೀಲ, ಧರ್ಮ ಒಡೆದವರು, ಜಗದ್ಗುರುಗಳ ಮೇಲೆ ಚಪ್ಪಲಿ ಎಸೆದವರನ್ನು ನಮ್ಮ ಪಕ್ಷಕ್ಕೆ ತೆಗೆದುಕೊಳ್ಳುತ್ತಾರೆ ಎಂಬ ನಂಬಿಕೆ ನನಗಿಲ್ಲ.
ಅವರನ್ನು ನಮ್ಮ ಪಕ್ಷಕ್ಕೆ ತೆಗೆದುಕೊಳ್ಳುವುದು ವರಿಷ್ಠರಿಗೆ ಬಿಟ್ಟದ್ದು ನಮ್ಮ ಪಕ್ಷದ ಸಿದ್ಧಾಂತಗಳೇ ಬೇರೆ ಅವರನ್ನು ನಮ್ಮ ಪಕ್ಷಕ್ಕೆ ತೆಗೆದುಕೊಳ್ಳುವುದಿಲ್ಲ ಎಂಬ ನಂಬಿಕೆ ನನಗಿದೆ. ಎರಡು ದೋಣಿಯಲ್ಲಿ ಈಜುವ ಹವ್ಯಾಸ ನನಗಿಲ್ಲ. ದೋಣಿ ಕೆಲಕಾಲ ಇರಲಿದೆ ಮತ್ತೆ ಮುಳುಗಲಿದೆ ಎಂದಿದ್ದಾರೆ.