ವಿಜಯಪುರ: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹಾಗೂ ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ನಡೆಗೆ ಉತ್ತರ ಕರ್ನಾಟಕದ ಮತ್ತೊಬ್ಬ ಬಿಜೆಪಿ ಮುಖಂಡ, ಮಾಜಿ ಸಚಿವ ಅಪ್ಪು ಪಟ್ಟಣಶೆಟ್ಟಿ ಬೇಸರ ವ್ಯಕ್ತಪಡಿಸಿದರು.
ವಿಜಯಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ, ಕೋವಿಡ್ ನಿಯಮ ಜಾರಿ ವಿಚಾರದಲ್ಲಿ ಸರ್ಕಾರ ಒಬ್ಬರಿಗೊಂದು ನ್ಯಾಯ, ಇನ್ನೊಬ್ಬರಿಗೊಂದು ನ್ಯಾಯ ನಡೆಯನ್ನು ಅನುಸರಿಸುತ್ತಿದೆ. ಚಿತ್ರನಟರಾದ ಶಿವರಾಜ್ ಕುಮಾರ್, ಪುನೀತ್ ರಾಜ್ಕುಮಾರ್ ಕೇಳಿದರೆ ಚಲನಚಿತ್ರ ಮಂದಿರದಲ್ಲಿ ಶೇ 100ರಷ್ಟು ಭರ್ತಿಗೆ ಅನುಮತಿ ನೀಡಲಾಗುತ್ತಿದೆ. ಆದರೆ ಧಾರ್ಮಿಕ ಆಚರಣೆ, ಜಾತ್ರೆಗಳಿಗೆ ಮಾತ್ರ ನಿರ್ಬಂಧ ಹೇರಿದ್ದಾರೆ ಎಂದರು.
ಚಿತ್ರಮಂದಿರಗಳ ಜತೆ ಜಿಮ್ಗಳಿಗೂ ಅನುಮತಿ ನೀಡಲಾಗಿದೆ. ಆದರೆ ಧಾರ್ಮಿಕ ಆಚರಣೆ, ಜಾತ್ರೆಗಳಿಗೆ ಯಾಕೆ ತಾರತಮ್ಯ?, ಶ್ರೀಮಂತರಿಗೊಂದು, ಜನಸಾಮಾನ್ಯರಿಗೊದು ಕೋವಿಡ್ ನೀತಿ ಮಾಡುವುದು ಸರಿಯೇ? ಎಂದು ಕೇಳಿದರು.
ಚಿತ್ರತಾರೆಯರು, ಜಿಮ್ ಮಾಲೀಕರು ಅನುಮತಿ ಕೊಡಿ ಎಂದು ಕೇಳುವ ಮೊದಲೇ ನಾವು ಜಿಲ್ಲಾಧಿಕಾರಿ ಮೂಲಕ ಜಾತ್ರೆ ಆಚರಣೆ ಮಾಡಲು ಸರ್ಕಾರಕ್ಕೆ ಮನವಿ ಮಾಡಿದ್ದೇವೆ. ಆದರೆ ಸಿಎಂ ಮಾತ್ರ ಈ ಕುರಿತು ಲಕ್ಷ್ಯ ವಹಿಸುತ್ತಿಲ್ಲ. ಜಾತ್ರೆ ಆಚರಣೆ ಬಯಲಲ್ಲಿ ಇರುತ್ತದೆ. ಅಲ್ಲಿ ಒಂದಿಷ್ಟು ನಿಬಂಧನೆ ವಿಧಿಸಿ ಅನುಮತಿ ಕೊಡಬೇಕು ಎಂದು ಸರ್ಕಾರವನ್ನು ಆಗ್ರಹಿಸಿದರು.
ಮುಖ್ಯಮಂತ್ರಿಗಳು ಸಾಕಷ್ಟು ದೈವ ಭಕ್ತರು. ಭಕ್ತರ ಭಾವನೆಗಳಿಗೆ ಬೆಲೆ ಕೊಡಬೇಕು. ಇಂದು ಚುನಾವಣಾ ಪ್ರಚಾರದಲ್ಲಿ ಜನ ಸೇರುವುದನ್ನು ಭಕ್ತರೆಲ್ಲ ಗಮನಿಸುತ್ತಿದ್ದಾರೆ. ಭಕ್ತಾದಿಗಳು ಉತ್ತರ ಕರ್ನಾಟಕ ಭಾಗದಲ್ಲಿ ಜಾತ್ರೆ ಆಚರಣೆಗೆ ಎಲ್ಲ ಸಿದ್ದತೆ ಮಾಡಿಕೊಂಡಿದ್ದಾರೆ. ಈಗ ಏಕಾಏಕಿ ಬಂದ್ ಮಾಡಿದರೆ ಹೇಗೆ? ಧಾರ್ಮಿಕ ಆಚರಣೆಗೆ ನಿರ್ಬಂಧ ವಿಧಿಸಿದ್ದು ಭಕ್ತರ ಮನಸ್ಸಿಗೆ ನೋವಾಗಿದೆ ಎಂದು ಹೇಳಿದರು.