ವಿಜಯಪುರ: ಜಿಲ್ಲೆಯಲ್ಲಿ ಮೊದಲ ಕೊರೊನಾ ಪಾಸಿಟಿವ್ ರೋಗಿಯಾಗಿದ್ದ 60 ವರ್ಷದ ಮಹಿಳೆ P-ನಂ. 221 ಸಂಪೂರ್ಣ ಗುಣಮುಖವಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.
ಮಹಿಳೆ ಸಂಬಂಧಿಕರ ಅಂತ್ಯಕ್ರಿಯೆಗೆ ಮಹಾರಾಷ್ಟ್ರದ ಇಚಲಕರಂಜಗಿಗೆ ಹೋಗಿ ಬಂದ ಮೇಲೆ ಕೊರೊನಾ ಸೋಂಕು ತಗುಲಿದ್ದು ಪತ್ತೆಯಾಗಿತ್ತು. ಮಹಿಳೆಯಿಂದ ಆಕೆಯ ಪತಿಗೂ ಸೋಂಕು ತಗುಲಿ ಆತ ಮೃತಪಟ್ಟಿದ್ದ. 25 ಜನರಿರುವ ತುಂಬು ಕುಟುಂಬವಾದ ಕಾರಣ ಜಿಲ್ಲೆಯಲ್ಲಿ ಸೋಂಕು ತಗುಲಿರುವ ಅರ್ಧದಷ್ಟು ಜನ ಈಕೆಯ ಸಂಪರ್ಕ ಹೊಂದಿದವರಾಗಿದ್ದಾರೆ.
ಕೋವಿಡ್ ಆಸ್ಪತ್ರೆಯಾಗಿ ಬದಲಾಗಿರುವುದರಿಂದ ಜಿಲ್ಲಾಸ್ಪತ್ರೆಯಲ್ಲಿ ನುರಿತ ತಜ್ಞರು ಚಿಕಿತ್ಸೆ ನೀಡಿದ ಪರಿಣಾಮ ಕೊರೊನಾ ಪಾಸಿಟಿವ್ ಇದ್ದ ವರದಿ ಈಗ ನೆಗೆಟಿವ್ ಆಗಿದೆ. ವೈದ್ಯರು, ನರ್ಸ್ಗಳು, ಆಸ್ಪತ್ರೆ ಸಿಬ್ಬಂದಿ ಹೂವಿನ ಮಳೆಗರೆದು ಗುಣಮುಖಳಾದ 221 ಸಂಖ್ಯೆಯ ರೋಗಿಯನ್ನು ಬೀಳ್ಕೊಡುವ ಮೂಲಕ ತಮ್ಮ ಸೇವೆಯ ಸಾರ್ಥಕತೆಯ ಸವಿ ಸವಿದರು.