ವಿಜಯಪುರ : ಕಬ್ಬಿಗೆ ಬೆಂಬಲ ಬೆಲೆ, ಕೃಷ್ಣಾ ಮೇಲ್ದಂಡೆ ಯೋಜನೆಯಲ್ಲಿ ಮನೆ ಮಠ ಕಳೆದುಕೊಂಡವರಿಗೆ ಕೂಡಲೇ ಪರಿಹಾರ, ಸಮರ್ಪಕವಾಗಿ ನೀರಾವರಿ ಯೋಜನೆ ಜಾರಿ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ವಿವಿಧ ರೈತ ಸಂಘಟನೆಗಳು ಸಿಎಂ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿ ಮಾಡಿಸಬೇಕೆಂದು ಒತ್ತಾಯಿಸಿ ಪ್ರತಿಭಟನೆ ನಡೆಸಿದರು.
ಜಿಲ್ಲೆಯ ನಿಡಗುಂದಿ ತಾಲೂಕಿನ ಆಲಮಟ್ಟಿ ಜಲಾಶಯದ ಕೃಷ್ಣಾ ನದಿಗೆ ಬಾಗಿನ ಅರ್ಪಿಸಿದ ನಂತರ ಕೆಬಿಜೆಎನ್ಎಲ್ ಕಚೇರಿಯಲ್ಲಿ ಜನಪ್ರತಿನಿಧಿಗಳ ಹಾಗೂ ಅಧಿಕಾರಿಗಳ ಸಭೆ ನಡೆಸುವ ವೇಳೆ 100ಕ್ಕೂ ಹೆಚ್ಚು ರೈತರು ಹಿಂಬದಿ ಗೇಟ್ ಬಳಿ ಜಮಾಯಿಸಿ ತಕ್ಷಣ ಸಿಎಂ ತಮ್ಮನ್ನು ಭೇಟಿಯಾಗಬೇಕು ಎಂದು ಪೊಲೀಸರ ಜತೆ ವಾಗ್ವಾದ ನಡೆಸಿದರು.
ಪರಿಸ್ಥಿತಿ ವಿಕೋಪಕ್ಕೆ ತಿರಗಬಹುದು ಎಂದು ಪೊಲೀಸರು ಗೇಟ್ ಹಾಕಿ ರೈತ ಹೋರಾಟಗಾರರನ್ನು ತಡೆದರು. ಇದರಿಂದ ಕೋಪಗೊಂಡ ರೈತ ಸಂಘಟನೆಗಳ ಸದಸ್ಯರು ಸಿಎಂ ಬೊಮ್ಮಾಯಿ ಹಾಗೂ ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಅವರಿಗೆ ಧಿಕ್ಕಾರ ಕೂಗಿದರು.
ಜಿಲ್ಲೆಯಲ್ಲಿ ಉತ್ತಮವಾಗಿ ಕಬ್ಬು ಇಳುವರಿ ಬಂದಿದೆ. ಆದರೆ, ಅದನ್ನು ಸಕ್ಕರೆ ಕಾರ್ಖಾನೆ ಮಾಲೀಕರು ಕಡಿಮೆ ದರ ನಿಗದಿ ಪಡಿಸಿ ಖರೀದಿಸಲು ಮುಂದಾಗಿದ್ದಾರೆ. ಇದರ ಜತೆ ಬಾಕಿ ಇರುವ ಕಬ್ಬಿನ ಹಣ ನೀಡುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇದನ್ನೂ ಓದಿ : ಬೆಳಗಾವಿಯಲ್ಲಿ ನೆರೆಹಾನಿಯ ಸಮೀಕ್ಷೆ ಶೀಘ್ರವೇ ಪೂರ್ಣಗೊಳಿಸಲು ಸಿಎಂ ಬೊಮ್ಮಾಯಿ ಸೂಚನೆ
ರೈತರ ಹೋರಾಟಕ್ಕೆ ಮಣಿದ ಸಿಎಂ: ಸುಮಾರು ಎರಡು ಗಂಟೆಗಳ ಕಾಲ ಸಭೆ ನಡೆಸಿದ ಸಿಎಂ ಬೊಮ್ಮಾಯಿ ರೈತರ ಪ್ರತಿಭಟನೆಗೆ ಮಣಿದು ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿದರು. ನಂತರ ರೈತರ ಸಮಸ್ಯೆ ಆಲಿಸಿದರು. ಅವರ ಮನವಿಯನ್ನು ಸಹ ಸ್ವೀಕರಿಸಿದ ಅವರು, ಈ ವೇಳೆ, ರೈತರ ನೂಕಾಟ ತಳ್ಳಾಟ ತಡೆಯಲು ಪೊಲೀಸರು ಹರಸಾಹಸ ಪಟ್ಟರು. ಸಿಎಂ ಮನವಿಗೆ ಸ್ಪಂದಿಸಿದ ರೈತರ ಹೋರಾಟಗಾರರು ಪ್ರತಿಭಟನೆ ಕೈ ಬಿಟ್ಟರು.