ವಿಜಯಪುರ : ಮುಳವಾಡ ಏತ ನೀರಾವರಿ ಯೋಜನೆಗೆ ಸಂಬಂಧಿಸಿದಂತೆ ಮಲಘಾಣ ಪಶ್ಚಿಮ ಕಾಲುವೆಗೆ ನೀರು ಹರಿಸಬೇಕೆಂದು ಆಗ್ರಹಿಸಿ ಅಖಂಡ ಕರ್ನಾಟಕ ರೈತ ಸಂಘದ ಪದಾಧಿಕಾರಿಗಳು ಕೃಷ್ಣ ಭಾಗ್ಯ ಜಲ ನಿಗಮ ಮಂಡಳಿ ಮುಖ್ಯ ಅಭಿಯಂತರರಿಗೆ ಅಧಿಕಾರಿಗಳ ಮೂಲಕ ಮನವಿ ಸಲ್ಲಿಸಿದರು.
ಬಬಲೇಶ್ವರ ತಾಲೂಕಿನ ಅರ್ಜುಣಗಿ, ಹೆಬ್ಬಾಳಹಟ್ಟಿ ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ಮಳೆ ಇಲ್ಲದೆ ಜನ, ಜಾನುವಾರುಗಳಿಗೆ ಕುಡಿಯುವ ನೀರಿನ ಸಮಸ್ಯೆಯಾಗಿದೆ. ಕೆರೆಗಳು ಸಹ ಬತ್ತಿ ಹೋಗಿವೆ. ಇದರಿಂದ ನೀರಿನ ಸಮಸ್ಯೆ ಹೆಚ್ಚಾಗಿದ್ದು, ತಕ್ಷಣ ಮಲಘಾಣ ಪಶ್ಚಿಮ ಕಾಲುವೆಗೆ ನೀರು ಹರಿಸಬೇಕೆಂದು ಮನವಿ ಮಾಡಿದರು.
ಮಹಾರಾಷ್ಟ್ರ ಭಾಗದಲ್ಲಿ ಉತ್ತಮ ಮಳೆಯಾಗಿದೆ. ಹೀಗಾಗಿ ಆಲಮಟ್ಟಿ ಜಲಾಶಯದಲ್ಲಿ ಅಧಿಕ ನೀರಿನ ಸಂಗ್ರಹವಿದೆ. ಮಲಘಾಣ ಪಶ್ಚಿಮ ಕಾಲುವೆಗೆ ನೀರು ಹರಿಸುವುದರ ಜತೆ ಕೆಲ ರೈತರು ನೀರನ್ನು ತಡೆಯದಂತೆ ಕ್ರಮಕೈಗೊಂಡು ಕಾಲುವೆಯ ಅಂಚಿನವರೆಗೆ ನೀರು ಹರಿಸಬೇಕೆಂದು ಆಗ್ರಹಿಸಿದರು.
ಈ ವೇಳೆ ರಾಜ್ಯ ಕಾರ್ಯದರ್ಶಿ ಅರವಿಂದ ಕುಲಕರ್ಣಿ, ಸದಾಶಿವ ಬರಟಗಿ, ಈರಣ್ಣ ದೇವರಗುಡಿ, ಸಿದ್ದಪ್ಪ ಕುಲಬೀಳಗಿ, ಮಹಾದೇವಪ್ಪ ಧಕ್ಕೇರಿ, ಮಲ್ಲಪ್ಪ ಧಕ್ಕೇರಿ ಸೇರಿ ಹಲವು ರೈತ ಮುಖಂಡರು, ರೈತರು ಉಪಸ್ಥಿತರಿದ್ದರು.