ವಿಜಯಪುರ : ಜಿಲ್ಲೆಯ ಕೊಲ್ಹಾರ ಪಟ್ಟಣದಲ್ಲಿ ರೈತ ಕುಟುಂಬವೊಂದು ಕಾಶ್ಮೀರಿ ಸೇಬು ಬೆಳೆದು ಎಲ್ಲರನ್ನೂ ಹುಬ್ಬೇರಿಸುವಂತೆ ಮಾಡಿದೆ.
ರುಚಿಕರ ಹಾಗೂ ಉತ್ಕೃಷ್ಟ ಗುಣಮಟ್ಟದ ದ್ರಾಕ್ಷಿ ಬೆಳೆಗೆ ಪ್ರಸಿದ್ದಿಯಾಗಿರುವ ವಿಜಯಪುರ ಜಿಲ್ಲೆಯಲ್ಲಿ ಪ್ರಗತಿಪರ ರೈತರೊಬ್ಬರು ಒಂದು ಎಕರೆಯಲ್ಲಿ ಕಾಶ್ಮೀರಿ ಸೇಬು ಬೆಳೆದು ಕಪ್ಪು ನೆಲದಲ್ಲಿ ಸಿಹಿಯಾದ ಸೇಬು ಬೆಳೆಯಬಹುದು ಎಂದು ತೋರಿಸಿಕೊಟ್ಟಿದ್ದಾರೆ. ಸಮಶೀತೋಷ್ಣ ಪ್ರದೇಶದಲ್ಲಿ ಮಾತ್ರ ಸೇಬು ಬೆಳೆಯುತ್ತಾರೆ. 4 ರಿಂದ 21 ಡಿಗ್ರಿ ಸೆಲಿಯಸ್ಡುನಷ್ಟು ಉಷ್ಣಾಂಶ ಇರಬೇಕು. ಅಲ್ಲದೇ 100 ರಿಂದ 124 ಸೆ.ಮೀನಷ್ಟು ವಾರ್ಷಿಕವಾಗಿ ಮಳೆ ಬೇಕಾಗುತ್ತದೆ.
ಹೀಗೆ ಕಾಶ್ಮೀರದ ಹಿಮದ ವಾತಾವರಣದಲ್ಲಿ ಬೆಳೆಯುವ ಸೇಬನ್ನು ಜಿಲ್ಲೆಯ ಕೊಲ್ಹಾರ ಪಟ್ಟಣದ ರೈತ ಸಿದ್ದಪ್ಪ ಬಾಲಗೊಂಡ ಎಂಬುವರು ಕಪ್ಪು ನೆಲದಲ್ಲಿ ಬೆಳೆದು ಯಶಸ್ಸು ಕಂಡಿದ್ದಾರೆ. ಸುಮಾರು ₹2 ಲಕ್ಷ ವೆಚ್ಚ ಮಾಡಿ ಸೇಬು ಒಂದು ವರ್ಷದ ಹಿಂದೆ ಬೆಳೆದಿದ್ದು, ಇನ್ನೆರಡು ತಿಂಗಳಲ್ಲಿ ಸೇಬು ಕಟಾವು ಮಾಡಬಹುದಾಗಿದೆ. ಮಾರುಕಟ್ಟೆಯಲ್ಲಿ ಸದ್ಯ ಭಾರಿ ಬೇಡಿಕೆ ಇರುವ ಕಾರಣ ರೈತ ಹೆಚ್ಚಿನ ಲಾಭದ ನಿರೀಕ್ಷೆಯಲ್ಲಿದ್ದಾನೆ.
ಭಾರತದ ಜಮ್ಮು ಕಾಶ್ಮೀರ, ಹಿಮಾಚಲ ಪ್ರದೇಶ, ಉತ್ತಾರಾಖಂಡ್, ಪಂಜಾಬ್, ನಾಗಾಲ್ಯಾಂಡ, ಮೇಘಾಲಯ ಸೇರಿ ದಕ್ಷಿಣ ಭಾರತದ ತಮಿಳುನಾಡಿನ ನೀಲಗಿರಿ ಬೆಟ್ಟದಲ್ಲಿ ಮಾತ್ರ ಸೇಬು ಬೆಳೆಯುತ್ತಾರೆ. ಮೊದಲ ಬಾರಿಗೆ ಕೋಲ್ಹಾರದ ರೈತ ಸಿದ್ದಪ್ಪ ಬಾಲಗೊಂಡ ಅವರು ಒಂದು ಎಕರೆ ಹೊಲದಲ್ಲಿ ಪ್ರಾಯೋಗಿಕವಾಗಿ ಸೇಬು ಬೆಳೆದಿದ್ದಾರೆ. ಇಂದು ಎಕರೆಯಲ್ಲಿ ಸುಮಾರು 300 ಸೇಬು ಗಿಡಗಳನ್ನು ಎರಡು ವರ್ಷದ ಹಿಂದೆ ನಾಟಿ ಮಾಡಿದ್ದಾರೆ. ಸದ್ಯ ಫಸಲು ಬಂದಿದೆ. ಪ್ರತಿ ಗಿಡದಲ್ಲಿ 10-30 ಕಾಯಿಗಳು ಇವೆ.
ಬಿಸಿಲಿನ ಈ ಪ್ರದೇಶದಲ್ಲಿ ಸೇಬು ಬೆಳೆಯಲು ಸಾಧ್ಯವೇ ಎಂಬ ರೈತರ ಪ್ರಶ್ನೆಗಳಿಗೆ ಉತ್ತರಿಸಲು ಕಾಶ್ಮೀರದಿಂದ ಗಿಡಗಳನ್ನು ತಂದು ನಾಟಿ ಮಾಡಿದ್ದು, ಪ್ರಯೋಗ ಯಶಸ್ವಿಯಾಗಿದೆ. ಹಣ್ಣುಗಳಿಗೆ ಸ್ಥಳೀಯ ಮಾರುಕಟ್ಟೆಯಲ್ಲಿ ಹೆಚ್ಚಿನ ಬೇಡಿಕೆಯಿದೆ. ಸೇಬನ್ನು ಬೇರೆ ಕಡೆ ನೀಡದೇ ಸ್ಥಳೀಯವಾಗಿಯೇ ಮಾರಾಟ ಮಾಡುವ ಉದ್ದೇಶ ಹೊಂದಲಾಗಿದೆ. ಹೊಸ ಸಾಹಸ ಮಾಡಿ ಯಶಸ್ವಿಯಾದ ರೈತ ಸಿದ್ದಪ್ಪ ಬಾಲಗೊಂಡ ಅವರ ವಿಭಿನ್ನ ಪ್ರಯತ್ನ ಮೆಚ್ಚಲೇಬೇಕು.
ಇದನ್ನೂ ಓದಿ: ಕೃಷಿ ಕಾರ್ಯಕ್ಕೆ ಅಶ್ವಮೇಧಗಳನ್ನು ಕಟ್ಟಿದ ರೈತ.. ಇವರ ನಿರ್ಧಾರಕ್ಕೆ ಕಾರಣ ಹೀಗಿದೆ...