ವಿಜಯಪುರ: ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ನೇತೃತ್ವದ ತಂಡ ವಿಜಯಪುರದ ಜಾಲಗೇರಿ ಗ್ರಾಮದಲ್ಲಿಂದು ಬರ ಅಧ್ಯಯನ ನಡೆಸಿತು. ಸ್ವತಃ ರೈತರ ಜಮೀನಿಗೆ ಭೇಟಿ ನೀಡಿದ ತಂಡ, ಅಧ್ಯಯನದ ಜೊತೆ ರೈತರ ಸಮಸ್ಯೆಗಳನ್ನು ಸಹ ಆಲಿಸಿತು. ಈ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿದ ಕಟೀಲ್ ಅವರು, ಸಿಎಂ ಸಿದ್ದರಾಮಯ್ಯ ಮತ್ತು ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
''ಬರದ ವಿಚಾರದಲ್ಲಿ ರಾಜ್ಯದ ಸಂಸದರು ಪ್ರಧಾನಿಯವರ ಭೇಟಿಗೆ ಸಮಯ ನಿಗದಿಪಡಿಸುವಂತೆ ಸಿಎಂ ಸಿದ್ದರಾಮಯ್ಯ ಸಲಹೆ ನೀಡಿದ್ದಾರೆ. ಇದು ಎರಡು ಬಾರಿ ಮುಖ್ಯಮಂತ್ರಿಯಾದ ಅವರಿಂದ ಬರುವ ಮಾತೇ? ಅವರಿಗೆ ಆಡಳಿತ ನಡೆಸಲು ಬರುವುದಿಲ್ಲ. ಎರಡೆರಡು ಬಾರಿ ಮುಖ್ಯಮಂತ್ರಿ, ಹಣಕಾಸು ಸಚಿವರಾದರೂ ಆಡಳಿತ ನಡೆಸಲು ಬರುತ್ತಿಲ್ಲ. ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (NDRF)ಯು ಹಣ ಬಿಡುಗಡೆ ಮಾಡಲು ಅದರದ್ದೇ ಆದ ಮಾರ್ಗಸೂಚಿಗಳಿವೆ. ಯಡಿಯೂರಪ್ಪನವರು ಮುಖ್ಯಮಂತ್ರಿ ಆಗಿದ್ದಾಗಲೂ ನೆರೆ ಬಂದಿತ್ತು. ಆದರೆ, ಅವರು ಕೇಂದ್ರದ ಹಣಕಾಸಿಗೆ ಕಾಯಲಿಲ್ಲ. ತಕ್ಷಣ ಹಾನಿಯಾದ ಮನೆಗಳಿಗೆ ಹೋಗಿ 5 ಲಕ್ಷ ರೂ. ಪರಿಹಾರ ಕೊಟ್ಟರು. ಅದೇ ರೀತಿ ಸಿದ್ದರಾಮಯ್ಯನವರು ನಡೆದುಕೊಳ್ಳಬೇಕು. ಮಾರ್ಗಸೂಚಿ ಪ್ರಕಾರ ಕೇಂದ್ರದಿಂದ ಹಣ ಬಂದೇ ಬರುತ್ತದೆ. ಹಾಗಾಗಿ ತಕ್ಷಣ ಪರಿಹಾರ ನೀಡಬೇಕಾಗಿರುವುದು ಅವರ ಜವಾಬ್ದಾರಿ. ಜಿಲ್ಲಾಧಿಕಾರಿಗಳ ಬಳಿ ಇರುವ NDRF ಹಣವನ್ನೇ ಬಿಡುಗಡೆ ಮಾಡಲಿ, ಸದ್ಯಕ್ಕೆ ಸಾಕಾಗುತ್ತದೆ. ಆದರೆ, ಬರ ವಿಚಾರದಲ್ಲಿ ಸಿಎಂ ರಾಜಕಾರಣ ಮಾಡುತ್ತಿದ್ದಾರೆ'' ಎಂದರು.
ಬ್ರೇಕ್ ಪಾಸ್ಟ್ ಮೀಟಿಂಗ್ ವಿಚಾರಕ್ಕೆ ಪ್ರತಿಕ್ರಿಯಿಸಿ, ''ರಾಜ್ಯದಲ್ಲಿ ಭೀಕರ ಬರ ಆವರಿಸಿದೆ. ಕಳೆದ ಬಾರಿ ಸಿದ್ದರಾಮಯ್ಯ ಸಿಎಂ ಆಗಿದ್ದಾಗ 4 ಸಾವಿರ ರೈತರು ಆತ್ಮಹತ್ಯೆ ಮಾಡಿಕೊಂಡರು. ಈ ಬಾರಿ ಕೇವಲ 5 ತಿಂಗಳಿನಲ್ಲೇ 250 ಅಧಿಕ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ವಿಜಯಪುರದಲ್ಲಿ 18 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆತ್ಮಹತ್ಯೆ ಮಾಡಿಕೊಂಡ ರೈತರಿಗೆ ಪರಿಹಾರ ಕೂಡ ನೀಡಿಲ್ಲ. ಸರಣಿ ಆತ್ಮಹತ್ಯೆಗಳು ನಡೆಯುತ್ತಿವೆ. ಬರದಿಂದ ರೈತ ಕಂಗೆಟ್ಟಿದ್ದಾನೆ. ಆದರೆ, ಆ ಬಗ್ಗೆ ಅವರಿಗೆ ಯೋಚನೆನೇ ಇಲ್ಲ. ತಲೆಯೂ ಕೆಡಿಸಿಕೊಂಡಿಲ್ಲ. ಇದರ ನಡುವೆ ಬ್ರೇಕ್ ಫಾಸ್ಟ್, ಬೇರೆ ಫಾಸ್ಟ್ ಮಾಡುತ್ತಿದ್ದಾರೆ. ಅವರಿಗೆ ಖುರ್ಚಿ ಉಳಿಸಿಕೊಳ್ಳುವುದು ಮುಖ್ಯವಾಗಿದೆ. ಆ ಬಗ್ಗೆ ಏನೆಲ್ಲ ತಂತ್ರಗಾರಿಕೆ ಮಾಡಬೇಕೋ ಅದನ್ನು ಮಾಡುತ್ತಿದ್ದಾರೆ. ರೈತರ ರಕ್ಷಣೆ ಹೇಗೆ ಮಾಡಬೇಕು ಎಂಬ ಯೋಚನೆಗೆ ಜಾಗವೇ ಇಲ್ಲ. ರೈತರ ರಕ್ಷಣೆ ಮಾಡಿದರೆ ಮಾತ್ರ ಅವರ ಸಿಎಂ ಸ್ಥಾನ ಉಳಿಯುತ್ತದೆ. ಕಡೆಗಣಿಸಿದರೆ ಉಳಿಯೋದಿಲ್ಲ'' ಎಂದು ಕಟೀಲ್ ಎಚ್ಚರಿಕೆ ರವಾನಿಸಿದ್ದಾರೆ.
ಇದನ್ನೂ ಓದಿ: ಸಿಎಂ ಸಿದ್ದರಾಮಯ್ಯ ನಿವಾಸದಲ್ಲಿ ಬ್ರೇಕ್ ಫಾಸ್ಟ್ ಮೀಟಿಂಗ್: ಡಿಕೆಶಿ ಸೇರಿ 16 ಸಚಿವರಿಗೆ ಆಹ್ವಾನ