ಮುದ್ದೇಬಿಹಾಳ: ಕೆಲವೇ ದಿನಗಳಲ್ಲಿ ಮುದ್ದೇಬಿಹಾಳ ಪಟ್ಟಣಕ್ಕೆ ಮೂರು ದಿನಕ್ಕೊಮ್ಮೆ ಕುಡಿವ ನೀರು ಪೂರೈಕೆಗೆ ಕ್ರಮ ಕೈಗೊಳ್ಳಲಾಗುವುದು ಎಂದು ಪುರಸಭೆ ಮುಖ್ಯಾಧಿಕಾರಿ ಗೋಪಾಲ ಕಾಸೆ ತಿಳಿಸಿದರು.
ಪಟ್ಟಣದ ಪುರಸಭೆ ಸಭಾಭವನದಲ್ಲಿ ಇಂದು ನಡೆದ ಮೊದಲ ಸಾಮಾನ್ಯ ಸಭೆಯಲ್ಲಿ ಮಾತನಾಡಿದ ಅವರು, ಸದ್ಯಕ್ಕೆ ಪಟ್ಟಣದ ವಿವಿಧ ವಾರ್ಡಗಳಿಗೆ 5ರಿಂದ 6 ದಿನಕ್ಕೊಮ್ಮೆ ಕುಡಿಯುವ ನೀರು ಪೂರೈಕೆ ಮಾಡಲಾಗುತ್ತಿದ್ದು, ಇನ್ನು ಹದಿನೈದು ದಿನಗಳ ಅವಧಿಯಲ್ಲಿ ನಿತ್ಯ 3 ದಿನಕ್ಕೊಮ್ಮೆ ನೀರು ಪೂರೈಕೆಗೆ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಇದೇ ವೇಳೆ ಪುರಸಭೆಗೆ ಹೆಚ್ಚಿನ ಮೊತ್ತದ ಕರ ಬಾಕಿ ಉಳಿಸಿಕೊಂಡಿರುವವರನ್ನು ಲೋಕ ಅದಾಲತ್‌ನಲ್ಲಿ ಹಾಕಿ ಕರ ಭರಿಸಿಕೊಳ್ಳಲಾಗುತ್ತದೆ ಎಂದು ತಿಳಿಸಿದರು. ಇದಕ್ಕೆ ವಿರೋಧ ವ್ಯಕ್ತಪಡಿಸಿದ ಸದಸ್ಯರು, ಐಟಿ ಮಾದರಿಯಲ್ಲಿ ದಿಢೀರ್ ದಾಳಿ ನಡೆಸಿ ಕರ ಬಾಕಿ ಉಳಿಸಿಕೊಂಡಿರುವವರಿಂದ ಹಣ ವಸೂಲಿ ಮಾಡಿ. ಹತ್ತು ಸಾವಿರಕ್ಕಿಂತ ಹೆಚ್ಚು ಹಣ ಬಾಕಿ ಉಳಿಸಿಕೊಂಡಿರುವವರೆಲ್ಲ ಕೋಟ್ಯಾಧೀಶರು, ಲಕ್ಷಾಧೀಶರಿದ್ದಾರೆ. ಅವರಿಗೆ ರಿಯಾಯಿತಿ ನೀಡುವುದು ಬೇಡ ಎಂದರು.
ಇನ್ನು ಪಟ್ಟಣದ ವಿವಿಧ ವಾರ್ಡ್ಗಳಲ್ಲಿ ಚರಂಡಿಗಳನ್ನು ತೆಗೆದು ಅದರ ತ್ಯಾಜ್ಯವನ್ನು ವಾರಗಟ್ಟಲೆ ಅಲ್ಲಿಯೇ ಬಿಡಲಾಗುತ್ತಿದೆ. ಇದರಿಂದ ಅನೈರ್ಮಲ್ಯ ವಾತಾವರಣ ನಿರ್ಮಾಣವಾಗುತ್ತಿದೆ. ಚರಂಡಿಯಿಂದ ಹೊರ ತೆಗೆದ ತ್ಯಾಜ್ಯವನ್ನು ಎರಡ್ಮೂರು ದಿನಕ್ಕೊಮ್ಮೆಯಾದರೂ ವಿಲೇವಾರಿ ಮಾಡಲು ಕ್ರಮ ಕೈಗೊಳ್ಳಬೇಕು ಎಂದು ಸದಸ್ಯರು ಸೂಚಿಸಿದರು.