ವಿಜಯಪುರ: ಜಿಲ್ಲೆಯ ಬಿಎಲ್ಡಿಇ ಡೀಮ್ಡ್ ವಿಶ್ವ ವಿದ್ಯಾಲಯದ ಹಂಗಾಮಿ ಉಪ ಕುಲಪತಿಗಳಾಗಿ ಡಾ.ಆರ್.ಎಸ್.ಮುಧೋಳ ನೇಮಕವಾಗಿದ್ದಾರೆ.
ಡಾ.ಆರ್.ಎಸ್.ಮುಧೋಳ ಅವರು ಮೂಲತಃ ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಕೋವಳ್ಳಿ ಗ್ರಾಮದವರು. ವಿಜಯಪುರದ ಕೆಸಿಪಿ ಸೈನ್ಸ್ ಕಾಲೇಜಿನಲ್ಲಿ ಪಿಯು ಮುಗಿಸಿ, ಹುಬ್ಬಳ್ಳಿಯ ಕೆಎಂಸಿಯಲ್ಲಿ ಎಂಬಿಬಿಎಸ್ ಮತ್ತು ಎಂಎಸ್ ಶಿಕ್ಷಣದ ನಂತರ ಬೆಳಗಾವಿ ಕೆಎಲ್ಇ ಜವಾಹರಲಾಲ್ ನೆಹರು ವೈದ್ಯಕೀಯ ಕಾಲೇಜಿನಲ್ಲಿ ಹಾಗೂ ಕೆಎಲ್ಇ ಡಾ. ಪ್ರಭಾಕರ ಕೋರೆ ಅವರ ಆಸ್ಪತ್ರೆಯಲ್ಲಿ ಪ್ರಾಧ್ಯಾಪಕ, ವಿಭಾಗ ಮುಖ್ಯಸ್ಥ, ಉಪ ಪ್ರಾಚಾರ್ಯ, ಆಸ್ಪತ್ರೆಯ ಸುಪರಿಟೆಡೆಂಟ್ ಹಾಗೂ ನಿರ್ದೇಶಕರಾಗಿ ಒಟ್ಟು 35 ವರ್ಷಗಳ ಆಡಳಿತ ಅನುಭವ ಹೊಂದಿದ್ದಾರೆ.
ಕಿವಿ, ಮೂಗು ಮತ್ತು ಗಂಟಲು ತಜ್ಞರೂ ಆಗಿರುವ ಡಾ.ಆರ್.ಎಸ್.ಮುಧೋಳ ಅವರು 4 ತಿಂಗಳ ಹಿಂದೆ ಬಿಎಲ್ಡಿಇ ಡೀಮ್ಡ್ ವಿಶ್ವವಿದ್ಯಾಲಯ ಸಮ ಉಪಕುಲಪತಿಯಾಗಿ ನೇಮಕಗೊಂಡಿದ್ದರು. ಸದ್ಯ ಉಪ ಕುಲಪತಿಯಾಗಿದ್ದ ಡಾ.ಎಂ.ಎಸ್.ಬಿರಾದಾರ ಅವರ ಅಕಾಲಿಕ ನಿಧನದಿಂದ ತೆರವಾದ ಸ್ಥಾನಕ್ಕೆ ಡಾ.ಆರ್.ಎಸ್ ಮುಧೋಳ ಅವರನ್ನು ಹಂಗಾಮಿ ಉಪ ಕುಲಪತಿಯಾಗಿ ನೇಮಕಗೊಳಿಸಲಾಗಿದೆ ಎಂದು ಬಿಎಲ್ಡಿಇ ಡೀಮ್ಡ್ ವಿವಿ ಕುಲಪತಿ, ಮಾಜಿ ಸಚಿವ ಎಂ.ಬಿ.ಪಾಟೀಲ ಆದೇಶಿಸಿದ್ದಾರೆ.