ಮುದ್ದೇಬಿಹಾಳ: ಸರ್ಕಾರಿ ನೌಕರರು ಆತ್ಮ ವಂಚನೆ ಮಾಡಿಕೊಂಡು ಕರ್ತವ್ಯ ನಿರ್ವಹಿಸಬಾರದು. ರೈತರಿಗೆ, ಸಾರ್ವಜನಿಕರಿಗೆ ಪ್ರಾಮಾಣಿಕ ಸೇವೆ ಒದಗಿಸಿದರೆ ಆ ಸೇವೆ ನಿವೃತ್ತಿ ನಂತರ ಆತ್ಮ ತೃಪ್ತಿ ನೀಡುತ್ತದೆ ಎಂದು ಪಶು ಸಂಗೋಪನಾ ಇಲಾಖೆಯ ವಿಜಯಪುರ ಜಿಲ್ಲಾ ಪಾಲಿಕ್ಲಿನಿಕ್‌ನ ಉಪ ನಿರ್ದೇಶಕ ಡಾ. ಎಸ್.ಸಿ.ಚೌಧರಿ ಹೇಳಿದರು.
ಪಟ್ಟಣದ ಹೇಮರಡ್ಡಿ ಕಲ್ಯಾಣ ಮಂಟಪದಲ್ಲಿ ಪಶು ಸಂಗೋಪನಾ ಇಲಾಖೆ ಸಿಬ್ಬಂದಿ, ರೈತರು ಹಾಗೂ ಮೈತ್ರಿ ಕಾರ್ಯಕರ್ತರು, ಸಹಾಯಕ ನಿರ್ದೇಶಕ ಹುದ್ದೆಯಿಂದ ಉಪ ನಿರ್ದೇಶಕ ಹುದ್ದೆಗೆ ಪದೋನ್ನತಿ ಹೊಂದಿದ ನಿಮಿತ್ತ ಏರ್ಪಡಿಸಿದ್ದ ಸನ್ಮಾನ ಸಮಾರಂಭದಲ್ಲಿ ಅವರು ಸನ್ಮಾನ ಸ್ವೀಕರಿಸಿ ಮಾತನಾಡಿದರು.
25-26 ವರ್ಷ ನಿರಂತರ ಈ ತಾಲೂಕಲ್ಲಿ ಸೇವೆ ಸಲ್ಲಿಸಿದ ಒಬ್ಬರೇ ಅಧಿಕಾರಿ ಎಂಬ ಹೆಗ್ಗಳಿಕೆ ನನ್ನದು. 20 ವರ್ಷ ಸಹಾಯಕ ನಿರ್ದೇಶಕನಾಗಿ ರೈತರ ಸಮಸ್ಯೆಗಳಿಗೆ ಸ್ಪಂದಿಸಿದ ಆತ್ಮ ತೃಪ್ತಿ ಇದೆ. ಇದು ಪ್ರತಿಯೊಬ್ಬರಿಗೂ ಇರಬೇಕು. ನನ್ನ ಕರ್ತವ್ಯದಲ್ಲಿ ಎಂದೂ ರಾಜಿ ಮಾಡಿಕೊಂಡಿಲ್ಲ. ಇದು ಸರ್ಕಾರಿ ನೌಕರರಿಗೆ ಮಾದರಿ ಆಗಬೇಕು. ಪಶು, ಪ್ರಾಣಿ, ಪಕ್ಷಿಗಳ ಮೇಲೆ ಪ್ರೀತಿ, ಕಾಳಜಿ ಇಟ್ಟುಕೊಂಡು ಈ ಇಲಾಖೆಯಲ್ಲಿ ಕೆಲಸ ಮಾಡಬೇಕು ಎಂದು ಕಿವಿಮಾತು ಹೇಳಿದರು.