ವಿಜಯಪುರ: ಜಿಲ್ಲೆಯಲ್ಲಿ ನಿನ್ನೆ ತಡರಾತ್ರಿ ಭಾರಿ ಮಳೆಯಾಗಿದೆ. ತಾಳಿಕೋಟೆಯ ಡೋಣಿ ನದಿಗೆ ಹೆಚ್ಚಿನ ನೀರು ಹರಿದು ಬಂದ ಪರಿಣಾಮ ಹಳೇ ಸೇತುವೆ ಜಲಾವೃತವಾಗಿದೆ. ಈ ಹಿನ್ನೆಲೆ ಮನಗೂಳಿ - ದೇವಾಪುರ ರಾಜ್ಯ ಹೆದ್ದಾರಿ 61 ಬಂದ್ ಆಗಿ ಸಂಚಾರ ಅಸ್ತವ್ಯಸ್ತವಾಗಿದೆ.
ವಿಜಯಪುರ ತಾಳಿಕೋಟೆ ಸಂಪರ್ಕ ಕಡಿತಗೊಂಡಿದ್ದು, 50 ಕಿ.ಮೀ ಸುತ್ತು ಹಾಕಿಕೊಂಡು ಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ. ಡೋಣಿ ನದಿಯ ಹೊಸ ಸೇತುವೆ ಬಿರುಕು ಬಿಟ್ಟು ಶಿಥಿಲಾವಸ್ಥೆಗೆ ತಲುಪಿದ ಕಾರಣ ಅದರ ಮೇಲೆ ಸಂಚಾರ ಸ್ಥಗಿತ ಮಾಡಲಾಗಿತ್ತು. ನೆಲ ಮಟ್ಟದ ಸೇತುವೆ ಮೇಲೆ ತಾತ್ಕಾಲಿಕ ಸಂಚಾರಕ್ಕೆ ಅನುವು ಮಾಡಿಕೊಡಲಾಗಿತ್ತು. ಶುಕ್ರವಾರ ತಡರಾತ್ರಿ ಮಳೆಯಾಗಿ ಡೋಣಿ ನದಿಗೆ ಅಪಾರ ಪ್ರಮಾಣದ ನೀರು ಹರಿದು ಬಂದು, ಮುಳ್ಳು ಕಂಟಿ ರಾಶಿ ಸೇತುವೆ ಬಳಿ ಜಮಾವಣೆಯಾಗಿದೆ. ಸದ್ಯ ಜೆಸಿಬಿ ಸಹಾಯದಿಂದ ಮುಳ್ಳುಕಂಟಿ ರಾಶಿ ತೆಗೆಯಲಾಗುತ್ತಿದೆ.
ಇದನ್ನೂ ಓದಿ: ದಕ್ಷಿಣ ಕನ್ನಡ: ವರುಣಾರ್ಭಟಕ್ಕೆ ವಿವಿಧೆಡೆ ಶಾಲೆಗೆ ರಜೆ, ಮಂಗಳೂರಿನ ಹಲವೆಡೆ ಅವಾಂತರ