ವಿಜಯಪುರ: ಸಾಮಾನ್ಯವಾಗಿ ಎಲ್ಲರ ಮನೆಗಳಲ್ಲಿ ಮಕ್ಕಳ ಹುಟ್ಟು ಹಬ್ಬ ಆಚರಿಸುವುದು ಎಲ್ಲರಿಗೂ ತಿಳಿದಿರುವ ವಿಚಾರ. ಇನ್ನು ಸಿಟಿ ಕಡೆಗಳಲ್ಲಿ ಜೀವನ ನಡೆಸುತ್ತಿದ್ದರೆ, ಹೆಚ್ಚೆಂದೆರೆ ಸ್ನೇಹಿತರ ಹುಟ್ಟು ಹಬ್ಬಗಳನ್ನ ಆಚರಿಸಲಾಗುತ್ತದೆ. ಆದರೆ, ಇಲ್ಲೊಂದು ಕುಟುಂಬ ತಮ್ಮ ನೆಚ್ಚಿನ ಶ್ವಾನದಿಂದ ಕೇಕ್ ಕಟ್ ಮಾಡಿಸಿ ಬರ್ಥ್-ಡೇ ಆಚರಿಸಿ, ಶುಭ ಕಾರ್ಯಕ್ರಮದಲ್ಲಿ ಅನ್ನಸಂತರ್ಪಣೆ ಮಾಡುವಂತೆ 200ಕ್ಕೂ ಅಧಿಕ ಜನರಿಗೆ ಟಿಫಿನ್ ಸಂತರ್ಪಣೆ ಕಾರ್ಯಕ್ರಮವನ್ನು ಮಾಡಿದ್ದಾರೆ.
ಜಿಲ್ಲೆಯ ನಿಡಗುಂದಿ ಪಟ್ಟಣದ ನಿವಾಸಿ ಸಂಗಯ್ಯ ಪತ್ರಿ ಮೂರು ವರ್ಷಗಳ ಹಿಂದೆ ಗದಗದಿಂದ ಶ್ವಾನವೊಂದನ್ನು ತಂದು ಅದಕ್ಕೆ ಟೈಗರ್ ಎಂದು ನಾಮಕರಣ ಮಾಡಿದ್ದಾರೆ. ಈ ಶ್ವಾನಕ್ಕೆ ಇಂದಿಗೆ ಮೂರು ವರ್ಷ ತುಂಬಿರುವ ಸಂತಸದಲ್ಲಿ ತಮ್ಮ ಟೈಗರ್ನಿಂದ ಕೇಕ್ ಮಾಡಿಸಿ ಸಂಭ್ರಮಿಸಿದ್ದಾರೆ. ಅದಲ್ಲದೇ, ತಮ್ಮ ನೆಚ್ಚಿನ ಕಾವಲುಗಾರನಿಗೆ 25ಗ್ರಾಂ ಚಿನ್ನದ ಸರವನ್ನೂ ಸಹ ಉಡುಗೊರೆಯಾಗಿ ನೀಡಿದ್ದಾರೆ. ಹುಟ್ಟು ಹಬ್ಬದ ಪ್ರಯುಕ್ತವಾಗಿ 200ಕ್ಕೂ ಅಧಿಕ ಜನರಿಗೆ ಕರೆ ನೀಡಿದ್ದು, ಎಲ್ಲರಿಗೂ ಉಪ್ಪಿಟ್ಟು, ಕೇಸರಿ ಬಾತ್ ಉಣಬಡಿಸಿದ್ದಾರೆ.
ಸಂಗಯ್ಯ ಪತ್ರಿ ಅವರಿಗೆ ಮೂರು ಜನ ಮಕ್ಕಳಿದ್ದು, ಈ ಟೈಗರ್ ನಾಲ್ಕನೇ ಮಗನಂತಾಗಿದೆ. ಕುಟುಂಬಸ್ಥರು ಸಹ ಈ ಶ್ವಾನವನ್ನು ಹೆಚ್ಚಿನ ಕಾಳಜಿ ವಹಿಸಿ ನೋಡಿಕೊಳ್ಳುತ್ತಿದ್ದು, ಇದು ಒಂದು ಪ್ರಾಣಿ ಎಂಬುದಕ್ಕಿಂತ ನಮ್ಮೆಲ್ಲರ ಅಚ್ಚು ಮೆಚ್ಚಿನ ಗೆಳೆಯನಂತೆ ಎಂಬುದು ಕುಟುಂಬದವರ ಮಾತು.
ಸಂಗಯ್ಯ ಪತ್ರಿ ಈ ವರ್ಷ ಮಾತ್ರವಲ್ಲದೇ, ಕಳೆದ ವರ್ಷವೂ ಸಹ ತಮ್ಮ ನೆಚ್ಚಿನ ಟೈಗರ್ನ ಹುಟ್ಟು ಹಬ್ಬವನ್ನು ಆಚರಿಸಿದ್ದರಂತೆ. ಹಿಂದಿನ ವರ್ಷ 500 ಜನರಿಗೆ ಆಹ್ವಾನ ನೀಡಿ ಊಟೋಪಾಚಾರದ ವ್ಯವಸ್ಥೆ ಮಾಡಿ, ಶ್ವಾನದ ಕುತ್ತಿಗೆಗೆ 50ಗ್ರಾಂ ಚಿನ್ನದ ಸರವನ್ನು ಉಡುಗೊರೆಯಾಗಿ ನೀಡಿದ್ದರಂತೆ.