ವಿಜಯಪುರ : ಶ್ವಾನಗಳ ಸಾಕಾಣಿಕೆಗೆ ಉತ್ತೇಜನ ನೀಡುವ ಉದ್ದೇಶದಿಂದ ನಗರದ ಪೊಲೀಸ್ ಗ್ರೌಂಡ್ನಲ್ಲಿ ಹಮ್ಮಿಕೊಂಡಿದ್ದ ಶ್ವಾನ ಪ್ರದರ್ಶನ ಕಾರ್ಯಕ್ರಮದಲ್ಲಿ ವಿವಿಧ ತಳಿಯ ದೇಶಿ-ವಿದೇಶಿ ಶ್ವಾನ, ವಿಭಿನ್ನವಾದ ಆಳೆತ್ತರದ ಹಾಗೂ ಅತೀ ಚಿಕ್ಕದಾದ ಶ್ವಾನಗಳು ಸಾರ್ವಜನಿಕರ ಗಮನ ಸೆಳೆದವು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಪೊಲೀಸ್ ಇಲಾಖೆ, ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ, ಜಿಲ್ಲಾ ಪ್ರಾಣಿ ದಯಾಸಂಘ ಹಾಗೂ ಕರ್ನಾಟಕ ಪಶು ವೈದ್ಯಕೀಯ ಸಂಘ ಜಿಲ್ಲಾ ಘಟಕ ವಿಜಯಪುರ ಅವರ ಸಂಯುಕ್ತ ಆಶ್ರಯದಲ್ಲಿ ಶ್ವಾನಗಳ ಪ್ರದರ್ಶನ ಆಯೋಜಿಸಲಾಗಿತ್ತು.
ಇದರಲ್ಲಿ ನೂರಾರು ಬಗೆಯ ಶ್ವಾನಗಳು ಭಾಗವಹಿಸಿದ್ದವು. ಸುಮಾರು 26 ತಳಿಯ ಶ್ವಾನಗಳು ಪ್ರದರ್ಶನಕ್ಕಿದ್ದು, ಸಾರ್ವಜನಿಕರ ಗಮನ ಸೆಳೆದವು. ಪ್ರದರ್ಶನಕ್ಕೆ 200 ಶ್ವಾನಗಳ ಮಾಲೀಕರು ನೋಂದಣಿ ಮಾಡಿಸಿಕೊಂಡಿದ್ದರು.
ಇಂದಿನ ಕಾಲದಲ್ಲಿ ಮನೆಯಲ್ಲಿ ನಾಯಿಗಳನ್ನು ಸಾಕುವುದು ಒಂದು ಪ್ಯಾಷನ್. ರೈತಾಪಿ ಜನರು ಸಹ ತಮ್ಮ ಹೊಲ-ಗದ್ದೆಗಳನ್ನು ರಕ್ಷಿಸಲು ಶ್ವಾನಗಳನ್ನು ಸಾಕುತ್ತಾರೆ. ಕೆಲವರಂತರೂ ಶ್ವಾನಗಳನ್ನು ತಮ್ಮ ಮಕ್ಕಳ ಹಾಗೆ ಸಾಕಿ ಸಲಹುತ್ತಾರೆ. ಇನ್ನಷ್ಟು ಶ್ವಾನಗಳ ಸಾಕಾಣಿಕೆಗೆ ಉತ್ತೇಜನ ನೀಡುವ ಹಿನ್ನೆಲೆಯಲ್ಲಿ ವಿಜಯಪುರದಲ್ಲಿ ಈ ಶ್ವಾನಗಳ ಪ್ರದರ್ಶನ ಆಯೋಜಿಸಲಾಗಿತ್ತು.
ಪ್ರದರ್ಶನದಲ್ಲಿ ದೇಶ-ವಿದೇಶಗಳ ಶ್ವಾನಗಳು ಕಂಡು ಬಂದವು. ಹೈದರಾಬಾದ್, ಕೊಲ್ಹಾಪುರ, ರಾಣೇಬೆನ್ನೂರ, ಜಮಖಂಡಿ, ಮುಧೋಳ, ವಿಜಯಪುರ, ಬಾಗಲಕೋಟೆ, ಚಿಕ್ಕೋಡಿ ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಯಿಂದ ಶ್ವಾನಗಳ ಮಾಲೀಕರು ತಮ್ಮ ಶ್ವಾನಗಳನ್ನು ಪ್ರದರ್ಶನಕ್ಕೆ ತಂದಿದ್ದರು.
50 ಸಾವಿರದಿಂದ ಹಿಡಿದು 1.50 ಲಕ್ಷ ಬೆಲೆಬಾಳುವ ಶ್ವಾನಗಳನ್ನು ಪ್ರದರ್ಶನಕ್ಕೆ ತಂದಿದ್ದರು. ಅದರಲ್ಲೂ ಪ್ರಮುಖವಾಗಿ ಮುಧೋಳದ ಹಾಂಡ, ಜರ್ಮನ್ ಶೆಫರ್ಡ್, ರಾಟ್ ವೀಲರ್, ಲ್ಯಾಬ್ರಡಾರ್, ಕೇನ್ಕೋರ್ಸ, ಅಮೆರಿಕನ್ ಬುಲ್ಲಿ, ಬಾಕ್ಸರ್, ಕಾಕರ್ ಸ್ಪ್ಯಾನಿಯಲ್, ಲ್ಹಾಸಪ್ಸಾ, ಗ್ರೇಡ್ಡೆನ್, ಪಮೇರಿಯನ್, ಫುಟ್ಬುಲ್ ಹೀಗೆ ವಿವಿಧ ತಳಿಯ ಮುದ್ದು ನಾಯಿಗಳು ಎಲ್ಲರ ಗಮನ ಸೆಳೆದವು. ವಿವಿಧ ಶ್ವಾನಗಳನ್ನು ನೋಡಿದ ಶ್ವಾನಪ್ರಿಯರು ಎಂಜಾಯ್ ಮಾಡಿದರು.