ವಿಜಯಪುರ: ಕೊರೊನಾ ವೈರಸ್ ಭಾರತಕ್ಕೆ ಕಾಲಿಟ್ಟ ಆರಂಭದ ದಿನಗಳಿಂದಲೂ ಯಾವ ವ್ಯಕ್ತಿ ಮೃತಪಟ್ಟರೂ ಜನರು ತಮಗೆಲ್ಲಿ ಸೋಂಕು ತಗುಲುತ್ತದೆಯೋ ಎಂಬ ಭಯದಲ್ಲಿದ್ದಾರೆ. ಇತ್ತ ವಿಜಯಪುರ ಜಿಲ್ಲಾಸ್ಪತ್ರೆಯಲ್ಲಿ ಕೆಲವು ಶವಗಳ ಸ್ವ್ಯಾಬ್ ತೆಗೆದು ಪರೀಕ್ಷೆಗೆ ಕಳಿಸಿದಾಗ ವರದಿ ಬರುವ ಮುನ್ನವೇ ಮರಣೋತ್ತರ ಪರೀಕ್ಷೆ ನಡೆಸುವ ಅನಿವಾರ್ಯತೆ ಕೂಡ ಎದುರಾಗುತ್ತಿದೆ. ವೈದ್ಯರು ಯಾವೆಲ್ಲಾ ಸುರಕ್ಷಿತ ಕ್ರಮಗಳನ್ನು ಅನುಸರಿಸಿ, ಹೇಗೆ ಮರಣೋತ್ತರ ಪರೀಕ್ಷೆ ನಡೆಸುತ್ತಿದ್ದಾರೆ ಎಂಬುದರ ವರದಿ ಇಲ್ಲಿದೆ.
ಜಿಲ್ಲಾಸ್ಪತ್ರೆಯಲ್ಲಿ ಮಾರ್ಚ್ 1 ರಿಂದ ಆಗಸ್ಟ್ 25ವರೆಗೆ ಒಟ್ಟು 81 ಶವಗಳ ಮರಣೋತ್ತರ ಪರೀಕ್ಷೆ ನಡೆಸಲಾಗಿದ್ದು, ಅವುಗಳ ಪೈಕಿ 3 ಶವಗಳಲ್ಲಿ ಸೋಂಕು ದೃಢಪಟ್ಟಿದೆ. ಮರಣೋತ್ತರ ಪರೀಕ್ಷೆ ನಡೆಸುವ ವೈದ್ಯರು ತಮ್ಮ ಆರೋಗ್ಯದ ದೃಷ್ಟಿಯಿಂದ ಪಿಪಿಇ ಕಿಟ್, ಮಾಸ್ಕ್ ಸೇರಿದಂತೆ ರಕ್ಷಣಾ ಕವಚಗಳನ್ನು ಧರಿಸಿಕೊಂಡು ಪರೀಕ್ಷೆ ನಡೆಸುತ್ತಾರೆ. ಶವಗಳಿಗೆ 4 ಲೀಟರ್ ಸ್ಯಾನಿಟೈಸರ್ ಸಿಂಪಡಿಸಿ, ಬಳಿಕ ಮರಣೋತ್ತರ ಪರೀಕ್ಷೆ ಮಾಡಲು ಸಿದ್ದತೆ ನಡೆಲಾಗುತ್ತದೆ. ಮೃತ ವ್ಯಕ್ತಿಯಲ್ಲಿ ಕೇವಲ 2 ಗಂಟೆಗಳ ಕಾಲ ಮಾತ್ರ ವೈರಸ್ ಜೀವಂತವಾಗಿರುತ್ತದೆ. ಬಳಿಕ ವೈರಸ್ ಮೃತದೇಹದಲ್ಲಿ ತಾನಾಗಿಯೇ ನಾಶವಾಗುತ್ತೆ. ಯಾರು ಹೆದರಿಕೊಳ್ಳಬಾರದು ಎನ್ನುತ್ತಾರೆ ಮರಣೋತ್ತರ ಪರೀಕ್ಷಾ ತಜ್ಞರು.
ಕೋವಿಡ್ ಲಕ್ಷಣಗಳಿರುವ 3 ಶವಗಳ ಮರಣೋತ್ತರ ಪರೀಕ್ಷೆ ನಡೆಸಿದಾಗ ಸಾಮಾನ್ಯ ಶವಗಳ ಪುಪ್ಪಸದ ತೂಕ 250 ಗ್ರಾಂ ಇದ್ದರೆ, ಕೊರೊನಾ ಸೋಂಕಿರುವ ಶವದ ಪುಪ್ಪುಸದ ತೂಕ 650 ಗ್ರಾಂ ಇರುತ್ತದೆಯಂತೆ. ಜೊತೆಗೆ ರಕ್ತನಾಳ ಕಣ ಸೀಳುವಿಕೆ ಕೂಡ ಕಂಡುಬರುತ್ತದೆ.
ಜಿಲ್ಲಾಸ್ಪತ್ರೆಯ ಮೂವರು ಸಿಬ್ಬಂದಿ ಮರಣೋತ್ತರ ಪರೀಕ್ಷೆಯಲ್ಲಿ ಭಾಗಿಯಾಗುತ್ತಿದ್ದು, ಪರೀಕ್ಷೆ ನಂತರ ಶವಗಳಿಗೆ ಮತ್ತೆ ಸ್ಯಾನಿಟೈಸರ್ ಸಿಂಪಡಿಸಿ, ಪ್ಲಾಸ್ಟಿಕ್ ಕವರ್ಗಳಲ್ಲಿ ಪ್ಯಾಕ್ ಮಾಡಲಾಗುತ್ತದೆ. ಬಳಿಕ ಸರ್ಕಾರದ ನಿರ್ದೇಶನಗಳನ್ನು ಅನುಸರಿಸಿ ಸಂಬಂಧಿಕರಿಗೆ ಶವ ಹಸ್ತಾಂತರ ಮಾಡಲಾಗುತ್ತದೆ. ಶವ ಪರೀಕ್ಷೆಗೆ ಬಳಸಿದ ತ್ಯಾಜ್ಯ ನಿರ್ವಹಣೆ ಮಾಡಲು ಜಿಲ್ಲಾಸ್ಪತ್ರೆ ಸೂಕ್ತ ಕ್ರಮ ಕೈಗೊಂಡಿದೆ.