ವಿಜಯಪುರ: ಕೊರೊನಾ ಸೋಂಕಿತರ ಚಿಕಿತ್ಸೆಗೆ ಸಂಬಂಧಪಟ್ಟಂತೆ ಗುರುತಿಸಲಾಗಿರುವ ಖಾಸಗಿ ಆಸ್ಪತ್ರೆಗಳಲ್ಲಿ ಸರ್ಕಾರದ ನಿರ್ದೇಶನದಂತೆ ಸಕಲ ಸೌಕರ್ಯಗಳನ್ನು ಹೊಂದಿರುವ ಶೇ.50 ರಷ್ಟು ಬೆಡ್‍ಗಳನ್ನು ಕಾಯ್ದಿರಿಸುವ ಬಗ್ಗೆ ತಕ್ಷಣ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ ಖಾಸಗಿ ವೈದ್ಯರಿಗೆ ಮತ್ತು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಆರೋಗ್ಯ ಇಲಾಖೆ ಅಧಿಕಾರಿಗಳು ಮತ್ತು ಖಾಸಗಿ ಆಸ್ಪತ್ರೆಗಳ ವೈದ್ಯರೊಂದಿಗೆ ಸಭೆ ನಡೆಸಿದರು. ಸಭೆಯಲ್ಲಿ ಕೋವಿಡ್ ಸೋಂಕಿತರ ಪರಿಣಾಮಕಾರಿ ಚಿಕಿತ್ಸೆ ಮತ್ತು ಆದ್ಯತೆ ಮೇಲೆ ಚಿಕಿತ್ಸೆ ಲಭ್ಯವಾಗಲು ಅನುಕೂಲವಾಗುವಂತೆ ಐಸಿಯು, ಆಕ್ಸಿಜನ್ ಮತ್ತು ವೆಂಟಿಲೇಟರ್ ವರ್ಗಗಳಲ್ಲಿ ತಲಾ ಪ್ರತಿಶತ 50ರಷ್ಟು ಬೆಡ್‍ಗಳನ್ನು ಕಾಯ್ದಿರಿಸುವ ಬಗ್ಗೆ ತಕ್ಷಣ ಕ್ರಮ ಕೈಗೊಳ್ಳಬೇಕು. ನಾಳೆ (ಶನಿವಾರ) ಎಲ್ಲ ಬೆಡ್‍ಗಳ ಪರಿಶೀಲನೆ ನಡೆಸಿ, ಸೋಮವಾರ ಸಂಜೆಯೊಳಗೆ ಈ ಬೆಡ್‍ಗಳಲ್ಲಿ ಚಿಕಿತ್ಸೆ ಆರಂಭಿಸುವಂತೆ ಸೂಚಿದರು.
ಇನ್ನು, ಜಿಲ್ಲಾದ್ಯಂತ ಕೋವಿಡ್ ನಿಯಂತ್ರಣದ ಜೊತೆಗೆ ಕೋವಿಡ್ ಅಲ್ಲದ ರೋಗಿಗಳ ಚಿಕಿತ್ಸೆಗೂ ವಿಶೇಷ ಗಮನ ನೀಡುವುದರ ಮೂಲಕ ಸಾರ್ವಜನಿಕರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಬೇಕು. ಎಸ್ಎಆರ್ಐ ಸಂಬಂಧಿತ ಪ್ರಕರಣಗಳಲ್ಲಿ ಆರ್ಟಿಪಿಸಿಆರ್ ಪರೀಕ್ಷೆಯಿಲ್ಲದೆ ಆಸ್ಪತ್ರೆಯಿಂದ ಬಿಡುಗಡೆ ಮಾಡಬಾರದು. ಸರ್ಕಾರದ ಹೊಸ ಮಾರ್ಗಸೂಚಿ ಅನ್ವಯ ಸೂಕ್ತ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದರು. ಕಾಯ್ದಿರಿಸಿದ ಬೆಡ್‍ಗಳ ಪರಿಶೀಲನೆಗೆ ತಂಡ ರಚಿಸುವ ಉದ್ದೇಶ ಹೊಂದಲಾಗಿದ್ದು, ಆಕ್ಸಿಜನ್, ವೆಂಟಿಲೇಟರ್, ಐಸಿಯುಗಳಲ್ಲಿ ಕಡ್ಡಾಯವಾಗಿ ಪ್ರತಿಶತ 50ರಷ್ಟು ಬೆಡ್‍ಗಳನ್ನು ಕಾಯ್ದಿರಿಸಬೇಕು. ವಿಜಯಪುರ ಜಿಲ್ಲೆಯಲ್ಲಿ ಖಾಸಗಿ ಆಸ್ಪತ್ರೆಗಳು ನೀಡುತ್ತಿರುವ ಸಹಕಾರ, ಉತ್ತರ ಕರ್ನಾಟಕದಲ್ಲಿ ಯಾವ ಭಾಗದಲ್ಲಿಯೂ ಲಭ್ಯವಾಗಿಲ್ಲ ಎಂದು ಸಂತಸ ವ್ಯಕ್ತಪಡಿಸಿದರು.
ಈ ಸಭೆಗೂ ಮುನ್ನ ಕೋವಿಡ್‍ಗೆ ಸಂಬಂಧಪಟ್ಟ ಘನತ್ಯಾಜ್ಯ ವಿಲೇವಾರಿ ನಿರ್ವಹಣೆ ಬಗ್ಗೆ ಸಭೆ ನಡೆಸಿದ ಜಿಲ್ಲಾಧಿಕಾರಿ, ಸದ್ಯಕ್ಕೆ ಈಗಿರುವ ಘನತ್ಯಾಜ್ಯ ವಿಲೇವಾರಿ ವ್ಯವಸ್ಥೆಯನ್ನೇ ಮುಂದುವರಿಸಿ, ಮುಂದಿನ ತಿಂಗಳಲ್ಲಿ ಪುನಃ ಈ ಕುರಿತು ಪ್ರತ್ಯೇಕವಾಗಿ ಚರ್ಚೆಗೆ ಕೈಗೆತ್ತಿಕೊಳ್ಳಲಾಗುವುದು ಎಂದರು.